ಹುಣಸಗಿ: ಕೊಡೇಕಲ್ ಗ್ರಾಮದ ನಾಡ-ಕಾರ್ಯಾಲಯದಲ್ಲಿ ಬಸವಸಾಗರ ಜಲಾಶಯದ ಎಡದಂಡೆ ಮುಖ್ಯ ಕಾಲುವೆಗೆ
ಏ. 10ರವರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಹಸಿರು ಸೇನೆ ಪದಾಧಿಕಾರಿಗಳು ಉಪ-ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಶ್ರೀ ಬಸವೇಶ್ವರ ವೃತ್ತದಿಂದ ನಾಡ-ಕಾರ್ಯಾಲಯದವರೆಗೂ ಘೋಷಣೆ ಕೂಗುತ್ತ ತೆರಳಿದ ನೂರಾರು ರೈತರು ಪ್ರತಿಭಟನೆ ನಡೆಸಿ ಏ. 10ರವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿದರು.
ಕೊಡೇಕಲ್ ಹಸಿರು ಸೇನೆ ಗ್ರಾಮ ಘಟಕದ ಅಧ್ಯಕ್ಷ ವೀರಸಂಗಪ್ಪ ಅಂಬಲಿಹಾಳ ಮಾತನಾಡಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ನಾರಾಯಣಪುರ ಜಲಾಶಯದ ನೀರನ್ನು ನಂಬಿ ಭತ್ತ ಸೇರಿದಂತೆ ಅಪಾರ ಪ್ರಮಾಣದ ಆಹಾರ ಧಾನ್ಯದ ಬೆಳೆಗಳು ಬಿತ್ತನೆ ಮಾಡಿದ್ದು, ಮಾರ್ಚ್ 25ರಂದು ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೇ ರೈತರು ಸಂಕಷ್ಟ ಅನುಭವಿಸುತ್ತಾರೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ನೀರು ಹರಿಸಲು ನಿಗಮಕ್ಕೆ ಆದೇಶಿಸಿ ರೈತರ ಹಿತ ಕಾಪಾಡಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದೇ ಹೋದಲ್ಲಿ ಉಗ್ರ ಹೋರಾಟಕ್ಕೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಗ್ರಾಮ ಘಟಕದ ಗೌರವಾಧ್ಯಕ್ಷ ಮಲ್ಲಣ್ಣ ಹೂಗಾರ, ಉಪಾಧ್ಯಕ್ಷ ಅಂಬಣ್ಣ ದೊರೆ, ಸಂಗಪ್ಪ ನಗನೂರು, ಪ್ರಭಾಕರ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಸಪ್ಪ ಯಮನಪ್ಪ ಕಟ್ಟಿಮನಿ, ಸಹ-ಕಾರ್ಯದರ್ಶಿಗಳಾದ ಪವಾಡ ಬಸಯ್ಯ ಹೊಸಮಠ, ಹಣಮಯ್ಯ ಹಾವೇರಿ, ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಸಜ್ಜನ್, ಖಜಾಂಜಿ ತಿಪ್ಪಣ್ಣ ದ್ಯಾಮನಾಳ, ಹಲವಪ್ಪಗೌಡ ದೊಡಮನಿ, ದುರ್ಗಣ್ಣ ಕಕ್ಕೇರಿ, ಚಂದ್ರಶೇಖರ ಕೂಡಲಗಿ ಸೇರಿದಂತೆ ಜುಮಾಲಪುರ, ಹಣಮಸಾಗರ, ಬೂದಿಹಾಳ, ಹುಲಿಕೇರಿ, ರಾಜನಕೋಳೂರು ಮತ್ತಿತರ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.ಪಿಎಸ್‌ಐ ಅರ್ಜುನಪ್ಪ ಅರಕೇರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವದಗಿಸಿದ್ದರು.