ಹೊಸಕೋಟೆ: ತಾಲೂಕಿನಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಿ ಪ್ರಸ್ತುತ ಇರುವ ಸ್ಥಿತಿ ಕಾಪಾಡಿಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದರು.
ತಾಲೂಕಿನ ಚೊಕ್ಕಹಳ್ಳಿಯಲ್ಲಿ ನಡೆದ ದಿನಸಿ ಕಿಟ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಾದ್ಯಂತ ಮೇ 4ರಿಂದ 17ರವರೆಗೂ ಲಾಕ್ ಡೌನ್‌ನ್ನು ವಿಸ್ತರಿಸಿದ್ದು ಸರ್ಕಾರದ ಸೂಚನೆ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ತಾಲೂಕಿನ ಬೈಲನರಸಾಪುರದಲ್ಲಿ ಸೋಂಕು ಪತ್ತೆಯಾಗಿದ್ದ 4 ವ್ಯಕ್ತಿಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಸೋಂಕು ಮುಕ್ತರಾಗಿದ್ದನ್ನು ದೃಢಪಡಿಸಿಕೊಂಡು ಬಿಡುಗಡೆ ಮಾಡಲಾಗಿದೆ. ಅಲ್ಲದೇ, 14 ದಿನ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಏ.10ರ ನಂತರ ಇದುವರೆಗೂ ಯಾವುದೇ ಸೋಂಕು ಪ್ರಕರಣ ಕಂಡುಬಂದಿಲ್ಲವಾ ದರೂ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವುದರಿಂದ ಕೇಂದ್ರ ಸರ್ಕಾರ ಕೆಂಪು ವಲಯವಾಗಿ ಪರಿಗಣಿಸಲು ಕಾರಣವಾಗಿದೆ ಎಂದರು.
ಮುಂದುವರಿಕೆ: ಲಾಕ್‌ಡೌನ್ ಅವಧಿ ವಿಸ್ತರಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪ್ರಸ್ತುತ ಇರುವ ವ್ಯವಸ್ಥೆ ಮುಂದುವರಿಸುವುದು ಅನಿವಾರ್ಯ. ಔಷಧಿ ಅಂಗಡಿಗಳಿಗೆ ವಿನಾಯ್ತಿ ನೀಡಿದ್ದು ದಿನಸಿ, ತರಕಾರಿ, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 9 ರಿಂದ 11, ಮಧ್ಯಾಹ್ನ 4 ರಿಂದ 6 ಗಂಟೆವರೆಗೂ ಮಾತ್ರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್, ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಹಾಗೂ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವ 11 ಗ್ರಾಮಗಳಲ್ಲಿ 4500 ಕಾರ್ಮಿಕರು, ಬಡಜನರು, ವಲಸಿಗರಿಗೆ ದಿನಸಿ ಪದಾರ್ಥಗಳು, ತರಕಾರಿ ಕಿಟ್ ವಿತರಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಲಲಿತಾ, ಸದಸ್ಯರಾದ ಹನುಮಂತರೆಡ್ಡಿ, ಮಂಜುಳಾ, ಟಿಎಪಿಸಿ ಎಂಎಸ್ ನಿರ್ದೇಶಕ ಮಂಜುನಾಥ್, ಮುಖಂಡ ಮಸ್ತಾನಪ್ಪ, ಬಂಗಾರಪ್ಪ ಮತ್ತಿತರರಿದ್ದರು.