ಮೈಸೂರು: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾ ಗುಣದೊಂದಿಗೆ ಜೀವನದಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಸಲಹೆ ನೀಡಿದರು.
ಕಲಬುರಗಿಯ ಪಾಲಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ವತಿಯಿಂದ ಕೇಂದ್ರ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧಮ್ಮ ಕೃತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬುದ್ಧ ಜಗತ್ತು ಕಂಡ ಚಿಂತನಾಶೀಲ ಹಾಗೂ ಶ್ರೇಷ್ಠ ವ್ಯಕ್ತಿಯಾಗಿದ್ದು, ಅಂದಿನ ಕಾಲಘಟ್ಟದಲ್ಲೇ ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳನ್ನು ಬುದ್ಧ ತಿಳಿದುಕೊಂಡಿದ್ದ. ಅಲ್ಲದೆ ಹಲವು ವರ್ಷಗಳ ಹಿಂದೆ ಬುದ್ಧ ಹೇಳಿದ ಹಲವು ಸಂಗತಿಗಳು ಇತ್ತೀಚಿಗೆ ವಿಜ್ಞಾನಿಗಳು ದೃಢಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಬುದ್ಧನ ತತ್ವಗಳೊಂದಿಗೆ ವಿಜ್ಞಾನವನ್ನು ಓದಿಕೊಳ್ಳುವ ಮೂಲಕ ಬದುಕಿನಲ್ಲಿ ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಪ್ರಸ್ತುತ ಲೋಕಾರ್ಪಣೆಗೊಳ್ಳುತ್ತಿರುವ ಕೃತಿಯಲ್ಲಿ ಗೌತಮನ ಬಾಲ್ಯದಿಂದ ಆರಂಭಿಸಿ ಆತ ಬುದ್ಧನಾಗುವವರೆಗಿನ ಎಲ್ಲಾ ಸಂಗತಿಗಳನ್ನು ವಸ್ತುನಿಷ್ಠವಾಗಿ ಉಲ್ಲೇಖೀಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಚಾರ ಸಂಕಿರಣದಲ್ಲಿ ಕನ್ನಡ ಪ್ರಾಧ್ಯಾಪಕ ಡಾ.ಚಂದ್ರಕಿರಣ್ ಕುಳವಾಡಿ, ಸಾಹಿತಿ ಡಾ.ಜಿ.ವಿ. ಆನಂದಮೂರ್ತಿ ಅವರು ಬುದ್ಧ ಮತ್ತು ಆತನ ಧಮ್ಮ ಕೃತಿ ವಿನ್ಯಾಸದ ನೆಲೆಗಳು ಹಾಗೂ ಬುದ್ಧ ಮತ್ತು ಆತನ ಧಮ್ಮ ಆಶಯವಿನ್ಯಾಸದ ನೆಲೆಗಳು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಪಾಲಿ ಇನ್ಸ್ಟಿಟ್ಯೂಟ್ ಅಧ್ಯಕ್ಷ ರಾಹುಲ್ ಖರ್ಗೆ, ಗೌರವ ನಿರ್ದೇಶಕ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಮೈಸೂರು ವಿವಿ ಪರೀûಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಇನ್ನಿತರರು ಹಾಜರಿದ್ದರು.