ಬೆಂಗಳೂರು: ಪ್ರತಿದಿನ ನಗದು ರೂಪದಲ್ಲೇ ವ್ಯಾಪಾರ ವಹಿವಾಟು ನಡೆಸುವ ಬೀದಿ ಬದಿ ವ್ಯಾಪಾರಿಗಳನ್ನು ಡಿಜಿಟಲ್ ವ್ಯಾಪಾರ ವಹಿವಾಟಿನತ್ತ ಸೆಳೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಜೀವನೋಪಾಯ ಇಲಾಖೆ ಹೆಜ್ಜೆಯಿರಿಸಿದೆ.
ಇದಕ್ಕಾಗಿಯೇ “ಮೈ ಭಿ ಡಿಜಿಟಲ್’ ಯೋಜನೆ ರೂಪಿಸಿದ್ದು, ಈ ಕುರಿತು ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಮತ್ತು ಸೌಲಭ್ಯಗಳನ್ನು ಪಡೆದಿರುವ ಎಲ್ಲ ಅರ್ಹ ಬೀದಿ ವ್ಯಾಪಾರಿಗಳು ಡಿಜಿಟಲ್‌ನಲ್ಲಿ ವ್ಯವಹರಿಸುವ ಸಂಬಂಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವತ್ತ ಇಲಾಖೆ ಆಲೋಚನೆ ನಡೆಸಿದೆ.
ಇತ್ತೀಚೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಗಳ ಮತ್ತು ಕೇಂದ್ರ ಹಣಕಾಸು ಮಂತ್ರಾಲಯ ಕಾಯದರ್ಶಿಗಳ ಮಟ್ಟದಲ್ಲಿ ನಡೆದ ಹಿರಿಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಪಿ-ಎಂ ಸ್ವನಿಧಿ ಯೋಜನೆಯಡಿ ಈಗಾಗಲೇ ಸಾಲ ಸೌಲಭ್ಯ ಪಡೆದಿರುವ ಬೀದಿ ಬದಿ ವ್ಯಾಪಾರಿಗಳನ್ನು ಡಿಜಿಟಲ್‌ನಲ್ಲೇ ವ್ಯವಹಾರ ನಡೆಸುವ ಕುರಿತಂತೆ ಸಮಾಲೋಚನೆ ಕೂಡ ನಡೆದಿದೆ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ಯೂಆರ್ ಕೋಡ್ ಒದಗಿಸುವುದು: ಪಿಎಂ ಸ್ವ-ನಿಧಿಯಿಂದ ಸಮೃದ್ಧಿ ಮೇಳ ಆಯೋಜಿಸುವ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳು “ಮೈ ಭಿ ಡಿಜಿಟಲ್’ ಕ್ಯಾಂಪ್ ಅನ್ನು ಈ ಮೇಳದೊಂದಿಗೆ ಆಯೋಜಿಸುವಂತೆ ಸೂಚಿಸಲಾಗಿದೆ. ಜತೆಗೆ ಡಿಜಿಟಲ್ ವ್ಯವಹಾರ ಮತ್ತು ಅನುಕೂಲತೆ ಕುರಿತಂತೆ ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವಂತೆ ಸಲಹೆ ನೀಡಲಾಗಿದೆ. ಜತೆಗೆ ಎಲ್ಲ ಪ್ರಮುಖ ಬ್ಯಾಂಕ್‌ಗಳ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಡಿಜಿಟಲ್ ವ್ಯವಹಾರ ನಡೆಸಲು ಕ್ಯೂಆರ್ ಕೋಡ್ ಒದಗಿಸಲು ಕ್ರಮ ವಹಿಸುಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಪಿ-ಎಂ ಸ್ವನಿಧಿ ಬಳಕೆಯಲ್ಲಿ 6ನೇ ಸ್ಥಾನ : ಸಿಲಿಕಾನ್ ಸಿಟಿ ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 1.5 ಲಕ್ಷ ಮಂದಿ ಬೀದಿಬದಿ ವ್ಯಾಪಾರಿಗಳು ಇದ್ದಾರೆ. ಇವರಲ್ಲಿ ಸುಮಾರು 80 ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಪಡೆದಿದ್ದಾರೆ. ಉಳಿದ 70 ಸಾವಿರ ಮಂದಿ ವ್ಯಾಪಾರಿಗಳಿಗೆ ಸರ್ಕಾರ ಇನ್ನೂ ಸಾಲ ಮಂಜೂರಾತಿ ಮಾಡಿಲ್ಲ ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ತಿಳಿಸಿದೆ. ರಾಜ್ಯ ವ್ಯಾಪಿ ಸುಮಾರು 5 ಲಕ್ಷ ಮಂದಿ ಬೀದಿಬದಿ ವ್ಯಾಪಾರಿಗಳಿದ್ದಾರೆ. ಇದರಲ್ಲಿ 1.9 ಲಕ್ಷ ಮಂದಿ ಮಾತ್ರ ಸಾಲ ಪಡೆದಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಹಲವು ಉತ್ತರ ಭಾರತದ ರಾಜ್ಯಗಳು ಪಿ-ಎಂ ಸ್ವನಿಧಿ ಯೋಜನೆಯಡಿ ಸೌಲ ಸೌಲಭ್ಯ ಪಡೆಯುವಲ್ಲಿ ಮುಂಚೂಣಿಯಲ್ಲಿವೆ. ಆದರೆ ಕರ್ನಾಟಕ ಈ ಯೋಜನೆಯ ಬಳಕೆಯಲ್ಲಿ ಆರನೇ ಸ್ಥಾನದಲ್ಲಿದೆ ಎಂದು ಹೇಳಿದೆ.
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಪಡೆಯುವ ವಿಚಾರದಲ್ಲಿ ರಾಜ್ಯ ಹಿಂದೆ ಉಳಿದಿದೆ. ಬ್ಯಾಂಕ್‌ಗಳು ಸಾಲ ನೀಡುವಿಕೆ ವಿಚಾರದಲ್ಲಿ ಕಿರಿಕಿರಿ ಉಂಟು ಮಾಡುತ್ತಿವೆ. ಜತೆಗೆ ರಾಜ್ಯ ಸರ್ಕಾರ ಕೂಡ ಈ ಯೋಜನೆ ಜಾರಿ ವಿಚಾರದಲ್ಲಿ ಹೇಳಿಕೊಳ್ಳುವಷ್ಟು ಉತ್ಸಾಹ ತೋರುತ್ತಿಲ್ಲ
. -ರಂಗಸ್ವಾಮಿ, ರಾಜ್ಯಾಧ್ಯಕ್ಷ, ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ
-ದೇವೇಶ ಸೂರಗುಪ್ಪ