ಟೆಹ್ರಾನ್ : ಹಿಜಾಬ್ ಸರಿಯಾಗಿ ಧರಿಸದ ಕಾರಣಕ್ಕೆ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾಗಿ, ಥಳಿಸಲ್ಪಟ್ಟು, ಕೋಮಾಕ್ಕೆ ಜಾರಿದ 22 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತರು, ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ: ಮಹ್ಸಾ ಅಮಿನಿ(22ವರ್ಷ) ಕಳೆದ ವಾರ ಇರಾನ್ ನ ಕುರ್ದಿಸ್ತಾನ್ ಪ್ರಾಂತ್ಯದಿಂದ ತನ್ನ ಸಂಬಂಧಿಕರನ್ನು ಭೇಟಿಯಾಗಲು ರಾಜಧಾನಿ ಟೆಹ್ರಾನ್ ಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಮಹ್ಸಾ ಹಿಜಾಬ್ ಅನ್ನು ಸಮರ್ಪಕವಾಗಿ ಧರಿಸಿಲ್ಲ ಎಂದು ಆರೋಪಿಸಿ ಇರಾನ್ ನೈತಿಕ ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಕೋಮಾ ಸ್ಥಿತಿ ತಲುಪಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಕೆ ಶುಕ್ರವಾರ ಸಾವನ್ನಪ್ಪಿದ್ದಾಳೆ. ಆದರೆ ಇರಾನ್ ಪೊಲೀಸರ ಹೇಳಿಕೆ ಪ್ರಕಾರ, ಆಕೆಯನ್ನು ಬಂಧಿಸಿದ ವೇಳೆ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಹೇಳಿಕೆ, ಅಮಿನಿಯನ್ನು ಪೊಲೀಸರು ಹೊಡೆದು ಹತ್ಯೆಗೈದಿರುವುದಾಗಿ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದರು.
ಈ ಘಟನೆ ಖಂಡಿಸಿ ಸರ್ಕಾರದ ವಿರುದ್ಧ ಇರಾನಿನ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿರುವ ವಿಡಿಯೋ, ಸರ್ಕಾರದ ಮಹಿಳಾ ವಿರೋಧಿ ವರ್ತನೆಗೆ ಧಿಕ್ಕಾರ ಹಾಕಿ, ಕೂದಲು ಕತ್ತರಿಸುವ ಹಾಗೂ ಹಿಜಾಬ್ ಸುಟ್ಟು ಹಾಕುವ ವಿಡಿಯೋವನ್ನು ಹಾಕುತ್ತಿದ್ದಾರೆ. ಈ ವಿಡಿಯೋಗಳು ಈಗ ವೈರಲ್ ಆಗಿವೆ.
ಇದನ್ನೂ ಓದಿ: ವಿಜಯ್ ದೇವರಕೊಂಡರಿಗೆ ಆ ದೋಷವಿದೆ, ಅವರು ಎಂದೂ.. ಜೋತ್ಯಿಷಿ ಹೇಳಿದ ಹಳೆಯ ಮಾತು ಮತ್ತೆ ವೈರಲ್
Related Articles
ಇರಾನಿನಲ್ಲಿ ಷರಿಯ ಕಾನೂನಿನ ಪ್ರಕಾರ 7 ವರ್ಷಕ್ಕಿಂತ ಮೇಲ್ಪಟ ಬಾಲಕಿಯರು, ಹುಡುಗಿಯರು, ಮಹಿಳೆಯರು ಹಿಜಾಬ್ ವನ್ನು ಕಡ್ಡಾಯವಾಗಿ ಧರಿಸಬೇಕೆನ್ನುವ ನಿಯಮವೊಂದು ಇದೆ. ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಮಹಿಳೆಯರು ಹಿಜಾಬ್ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನಿನ ಪತ್ರಕರ್ತೆ ಮಾಸಿಹ್ ಅಲಿನೆಜಾದ್ ಎನ್ನುವವರು ಇರಾನಿನ ಮಹಿಳೆಯರು ಕೂದಲು ಕತ್ತರಿಸಿ, ಹಿಜಾಬ್ ಸುಟ್ಟು ಹಾಕಿ ಸರ್ಕಾರದ ವಿರುದ್ದ, ಮಹ್ಸಾ ಅಮಿನಿಯನ್ನು ಕೊಂದ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 7 ನೇ ವಯಸ್ಸಿನಿಂದ ನಾವು ಕೊದಲು ಮುಚ್ಚಿ, ಹಿಜಾಬ್ ಧರಿಸದಿದ್ದರೆ, ನಾವು ಶಾಲೆಗೆ ಹೋಗಲು, ಕಲಸ ಹುಡುಕಲು ಸಾಧ್ಯವಾಗಲ್ಲ. ಈ ಲಿಂಗ ವರ್ಣಭೇದ ನೀತಿಯಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ಬರೆದು ಕೂದಲು ಕತ್ತರಿಸಿ, ಹಿಜಾಬ್ ಸುಟ್ಟು ಹಾಕುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.