ಇತ್ತೀಚೆಗೆ “ಮಹಿರ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಮಹೇಶ್ ಗೌಡ, ಹೊಸ ವರ್ಷದಲ್ಲಿ ಹೊಸ ಕಥೆಯೊಂದಿಗೆ ಪುನಃ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದ್ದಾರೆ. ಹೌದು, ಮಹೇಶ್‌ಗೌಡ ನಿರ್ದೇಶನದ ಚೊಚ್ಚಲ ಚಿತ್ರ “ಮಹಿರ’ ಬಗ್ಗೆ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಆ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಗಳ ಬಳಿಕ ಮಹೇಶ್‌ಗೌಡ ಅವರನ್ನು ಒಂದಷ್ಟು ಅವಕಾಶಗಳು ಹುಡುಕಿ ಬಂದಿದ್ದು ನಿಜ.
ಈಗ ಅವರು, ಹೊಸತರಹದ ಕಥೆ ಆಯ್ಕೆ ಮಾಡಿಕೊಂಡು ಜನವರಿ ಅಥವಾ ಫೆಬ್ರವರಿಯಲ್ಲಿ ಚಾಲನೆ ಕೊಡಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಹೇಳುವ ಮಹೇಶ್‌ಗೌಡ, “ಈ ಬಾರಿ ಒಬ್ಬ ಹೀರೋ ಇರಲಿದ್ದಾರೆ. ತಂತ್ರಜ್ಞರೆಲ್ಲರೂ ಹೊಸಬರಿರುತ್ತಾರೆ. “ಮಹಿರ’ ನಂತರ ಸಿನಿಮಾ ನಿರ್ದೇಶನ ಮಾಡಲು ಅವಕಾಶಗಳು ಬಂದಿದ್ದು ನಿಜ. ನಾನು ಅವಸರದಲ್ಲಿ ಏನೋ ಮಾಡಬಾರದು ಅಂತ ಸಮಯ ತೆಗೆದುಕೊಂಡೆ. ಈಗ ಒಂದು ಹೊಸ ರೀತಿಯ ಕಥೆ ಹೆಣೆದಿದ್ದೇನೆ.
ಅದೊಂದು ಆ್ಯಕ್ಷನ್ ಜಾನರ್ ಇರಲಿದೆ. ಸೈಕೋ ಥ್ರಿಲ್ಲರ್ ಕಥೆಯಲ್ಲಿ ಮೈಂಡ್ ಗೇಮ್ ಇರಲಿದೆ. ಈ ಸಲ ಡಿಫರೆಂಟ್ ಆ್ಯಕ್ಷನ್‌ನೊಂದಿಗೆ ನೋಡುಗರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತೇನೆ. ಅದೊದು ಪರಿಪೂರ್ಣ ಆ್ಯಕ್ಷನ್ ಇರಲಿದೆ. ವಿದೇಶದಲ್ಲಿರುವ ಗೆಳೆಯರು ನಿರ್ಮಾಣದ ಜವಾಬ್ದಾರಿ ಹೊರುತ್ತಿದ್ದಾರೆ. ಕಥೆ, ಚಿತ್ರಕಥೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ನನ್ನದು. ಚಿತ್ರಕ್ಕಿನ್ನು ನಾಯಕ, ನಾಯಕಿಯ ಆಯ್ಕೆ ನಡೆಯಬೇಕಿದೆ.
ಚಿತ್ರದ ವಿಶೇಷವೆಂದರೆ, ಇಲ್ಲಿ ಹಾಡು ಇರಲ್ಲ. ವಿನಾಕಾರಣ ಹಾಡು ತುರುಕಲು ಇಷ್ಟವಿಲ್ಲ. ಒಂದಂತೂ ನಿಜ, “ಮಹಿರ’ ಸಿನಿಮಾಗಿಂತಲೂ ವಿಭಿನ್ನ ಸಿನಿಮಾ ಕೊಡುವ ಪ್ರಯತ್ನ ಮಾಡುತ್ತೇನೆ. ಬಹುತೇಕ ಕನ್ನಡ ಕಲಾವಿದರೇ ಇರಲಿದ್ದಾರೆ’ ಎಂದು ವಿವರಿಸುವ ನಿರ್ದೇಶಕರು, “ಮಹಿರ’ ಕಮರ್ಷಿಯಲ್ ಆಗದಿದ್ದರೂ, ಒಳ್ಳೆಯ ಹೆಸರು ತಂದುಕೊಟ್ಟಿತು. ಹಾಗಾಗಿಯೇ, ನನ್ನ ಮೇಲೆ ಭರವಸೆ ಇಟ್ಟು, ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ.
ನನ್ನ ಹೊಸ ಕಥೆಯಲ್ಲಿ ನಾಯಕ ಇದ್ದರೂ, ಕಥೆ ಸಾಗೋದು ನಾಯಕಿ ಮೇಲೆ. ನನ್ನ ಕಥೆಯಲ್ಲಿ ನಾಯಕಿಗೆ ಪ್ರಧಾನ ಪಾತ್ರವಿದೆ. ಅದರಲ್ಲೂ ಹೆಚ್ಚು ಆದ್ಯತೆ ಮಹಿಳಾ ಪಾತ್ರಕ್ಕೆ ಕೊಡುತ್ತೇನೆ. ಅದೊಂದು ಕಂಟೆಂಟ್ ಇರುವ ಚಿತ್ರ. ಸ್ಟ್ರಾಂಗ್ ಆ್ಯಕ್ಷನ್ ಸಿನಿಮಾದ ಹೈಲೈಟ್’ ಎಂದಷ್ಟೇ ವಿವರಿಸುವ ಅವರು, ಇಷ್ಟರಲ್ಲೇ ಚಿತ್ರದ ನಾಯಕ, ನಾಯಕಿ, ಶೀರ್ಷಿಕೆ ಹಾಗು ಉಳಿದ ವಿವರ ಕೊಡುವುದಾಗಿ ಹೇಳುತ್ತಾರೆ.