ಉಡುಪಿ: ಜೀವನದಲ್ಲಿ ಗುರಿ ಬಹಳ ಮುಖ್ಯ. ಆದರೆ ಯಾವ ರೀತಿಯ ಗುರಿಯನ್ನು ಇಟ್ಟುಕೊಳ್ಳಬೇಕೆಂಬ ಕಲ್ಪನೆ ಬಹಳ ಮಂದಿಗೆ ಇರುವುದಿಲ್ಲ. ಕೆಲವರು ಗುರಿಗಳನ್ನು ಹೊಂದಿರುತ್ತಾರೆ. ಆದರೆ ಆ ಗುರಿಗಳಲ್ಲಿ ಪ್ರತ್ಯೇಕತೆ ಇಲ್ಲ ಎಂದು ಮೈಂಡ್‌ಟ್ರೀಯ ಚೇರ್ಮನ್ ಕೃಷ್ಣಕುಮಾರ್ ನಟರಾಜ ಹೇಳಿದರು. ಅವರು ರವಿವಾರ ಮಾಹೆಯ 26ನೇ ಘಟಿಕೋತ್ಸವದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉದ್ದಿಮೆಗಳಿಗೆ ಅವಕಾಶ
ಬೆಂಗಳೂರು ಇಂದು ವಿಶ್ವದ ನಾಲ್ಕನೇ ಸ್ಟಾರ್ಟ್ ಅಪ್ ಹಬ್ ಆಗಿ ಬೆಳೆಯುತ್ತಿದೆ. ಸಂಜಯ್ ವಿಜಯಕುಮಾರ್, ರಶ್ಮಿ ದಾಗಾ, ಡಾ| ಹರೀಶ್ ಹಂದೆ ಮತ್ತು ನಿತೇಶ್ ಚಿನಿವಾರ್ ಅವರಂತಹ ಹಲವರು ಸ್ಟಾರ್ಟ್ ಅಪ್ ಮೂಲಕ ಉನ್ನತ ಸಾಧನೆ ಮಾಡಿದ್ದಾರೆ ಎಂದರು.
ಡಾ| ಟಿಎಂಎ ಪೈ ಚಿನ್ನದ ಪದಕವನ್ನು ದಂತ ವೈದ್ಯಕೀಯ ಕಾಲೇಜಿನ ಕೃತಿಕಾ ಬಿ., ಅಲೈಡ್ ಹೆಲ್ತ್ ಸೈನ್ಸ್‌ನ ವಿದ್ಯಾರ್ಥಿ ಅತಿರಾ ಸಿ. ಅನೀಲ್ ಪಡೆದರು. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಸಮಾರೋಪ ಭಾಷಣ ಮಾಡಿದರು. ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್. ಪೈ, ಕುಲಪತಿ ಡಾ| ವಿನೋದ್ ಭಟ್, ಸಹ ಕುಲಪತಿಗಳಾದ ಡಾ| ಅಬ್ದುಲ್ ರಜಾಕ್ ಎಂ.ಎಸ್., ಡಾ| ಪೂರ್ಣಿಮಾ ಬಾಳಿಗಾ ಬಿ, ಕುಲಸಚಿವರಾದ ಡಾ| ವಿನೋದ್ ಥಾಮಸ್, ಡಾ| ನಾರಾಯಣ ಸಭಾಹಿತ್, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕಿ ಡಾ| ಗೀತಾ ಮಯ್ಯ ಉಪಸ್ಥಿತರಿದ್ದರು. ಸಹಕುಲಪತಿಗಳಾದ ಪಿ.ಎಲ್.ಎನ್.ಜಿ. ರಾವ್ ಸ್ವಾಗತಿಸಿ,. ಡಾ| ವಿ. ಸುರೇಂದ್ರ ಶೆಟ್ಟಿ ಮಾಹೆ ಕುರಿತು ಪ್ರಸ್ತಾವನೆಗೈದರು. ಚೀಫ್ ಇನ್ನೊವೇಶನ್ ಆಫೀಸರ್ ಡಾ| ಅರುಣಾ ಶಾನುಭಾಗ್ ಅತಿಥಿಗಳ ಪರಿಚಯ ಮಾಡಿದರು. ಡಾ| ರೇಖಾ ಶೆಣೈ ನಿರೂಪಿಸಿದರು. ಡಾ| ಮಲ್ಲಿಕಾರ್ಜುನ ರಾವ್ ವಂದಿಸಿದರು.
ರೋಲ್ ಮಾಡೆಲ್‌ಗಳ ಉದಾಹರಣೆ
ಗುರಿ ಸಾಧಿಸಿದ ರೋಲ್ ಮಾಡೆಲ್‌ಗಳ ಉದಾಹರಣೆ ಮಾಹೆಯಲ್ಲಿಯೇ ಇದೆ. ಎಂಐಟಿ ವಿದ್ಯಾರ್ಥಿ ಸತ್ಯ ನಾದೆಲ್ಲ ಮೈಕ್ರೋ ಸಾಫ್ಟ್ ಸಿಇಒ ಆದರು. ನೋಕಿಯಾದ ಸಿಇಒ ರಾಜೀವ್ ಸೂರಿ ಕೂಡ ಎಂಐಟಿ ವಿದ್ಯಾರ್ಥಿ. ನನಗೆ ತಿಳಿದ ಮಟ್ಟಿಗೆ ಭಾರತದ ಯಾವುದೇ ವಿ.ವಿ. ವಿಶ್ವದ ಎರಡು ಪ್ರತಿಷ್ಠಿತ ಕಂಪೆನಿಗಳಿಗೆ ಸಿಇಒಗಳನ್ನು ಕೊಟ್ಟಿಲ್ಲ. ನಾನು ಇನ್ನೆರಡು ದಶಕಗಳಲ್ಲಿ ಮಾಹೆಯ 2018ರ ಬ್ಯಾಚ್‌ನಿಂದ ನಾಲ್ವರು ವಿಶ್ವಮಾನ್ಯ ಸಿಇಒಗಳ ನಿರೀಕ್ಷೆಯಲ್ಲಿದ್ದೇನೆ ಎಂದು ಕೃಷ್ಣಕುಮಾರ್ ನಟರಾಜ ಹೇಳಿದರು.