ಮಣಿಪಾಲ: ಮಾಹೆ ವಿ.ವಿ. ಮತ್ತು ಭಾರತೀಯ ವಿಶ್ವವಿದ್ಯಾ ಲಯಗಳ ಸಂಘದಿಂದ ಕೆಎಂಸಿಯ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮಹಿಳೆಯರ “ಆಲ್ ಇಂಡಿಯಾ ಇಂಟರ್ ಝೋನ್ ಇಂಟರ್ ಯುನಿವರ್ಸಿಟಿ ಚೆಸ್ ಚಾಂಪಿಯನ್‌ಶಿಪ್ 2022-23′ ಬುಧವಾರ ಆರಂಭಗೊಂಡಿತು.
ಅಧ್ಯಕ್ಷತೆ ವಹಿಸಿದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಚೆಸ್ ಪ್ರಬುದ್ಧರ ಕ್ರೀಡೆಯಾಗಿದ್ದು, ಭಾರತವು ಚೆಸ್‌ನಲ್ಲಿ ವಿಶ್ವ ಮನ್ನಣೆ ಪಡೆಯುತ್ತಿದೆ. ಮಾಹೆ ವಿ.ವಿ.ಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ ಎಂದರು.
ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಕ್ರೀಡೆಯು ಮಾಹೆಯ ಜೀವನ ಕ್ರಮದಲ್ಲಿ ಒಂದಾಗಿದೆ. ಭಾರತವೂ ಚೆಸ್‌ನಲ್ಲಿ ಪವರ್‌ಹೌಸ್ ಆಗುತ್ತಿದೆ. ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಚೆಸ್ ಆಟಗಾರರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದರು.
ಕರ್ನಾಟಕದ ಮೊದಲ ಮಹಿಳಾ ಇಂಟರ್‌ನ್ಯಾಶನಲ್ ಮಾಸ್ಟರ್ ಈಶಾ ಶರ್ಮ ಮಾತನಾಡಿ, ಮಾಹೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಮೂಲಕ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸ್ಪರ್ಧೆಯಲ್ಲಿ ಸಿಗುವ ಅನುಭವ ಭವಿಷ್ಯದ ಜೀವನಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು. ಇಂಡಿಯನ್ ವಿಶ್ವ ವಿದ್ಯಾಲಯ ಸಂಘದ ಅನುರಾಗ್ ಸಿಂಗ್ ಶುಭ ಹಾರೈಸಿದರು.
ಉಪೇಂದ್ರ ನಾಯಕ್ ಅತಿಥಿ ಪರಿಚಯ ಮಾಡಿದರು. ಮಾಹೆ ನ್ಪೋರ್ಟ್ಸ್ ಕೌನ್ಸಿಲ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಡಾ| ಶೋಭಾ ಎಂ.ಇ. ವಂದಿಸಿದರು. ಎಂಐಸಿ ಕಾರ್ಪೋರೇಟ್ ಕಮ್ಯೂನಿಕೇಶ್‌ನ ಮುಖ್ಯಸ್ಥ ಡಾ| ಪದ್ಮಕುಮಾರ್ ಕೆ. ನಿರೂಪಿಸಿದರು.
ಚೆನ್ನೈನ ಎಸ್‌ಆರ್‌ಎಂಐಎಸ್‌ಟಿ, ಮದ್ರಾಸ್ ವಿ.ವಿ., ಕೋಲ್ಕತಾದ ಅದಮಸ್ ವಿ.ವಿ., ದಿಲ್ಲಿ ವಿ.ವಿ., ಒಸ್ಮಾನಿಯ ವಿ.ವಿ., ಜಾಧವ್‌ಪುರ್ ವಿ.ವಿ., ಕೊಲ್ಹಾಪುರದ ಶಿವಾಜಿ ವಿ.ವಿ., ಪುಣೆ ಸಾವಿತ್ರಿಬಾೖ ವಿ.ವಿ., ಕೊಯ ಮತ್ತೂರಿನ ಭಾರತೀಯ ವಿ.ವಿ., ಮುಂಬಯಿ ವಿ.ವಿ., ಗುಜ ರಾತ್ ವಿ.ವಿ., ಕ್ಯಾಲಿಕಟ್ ವಿ.ವಿ., ಪಟಿಯಾಲದ ಪಂಜಾಬ್ ವಿ.ವಿ., ಬಿಸಲ್ಪುರದ ಅಟಲ್ ಬಿಹಾರಿ ವಾಜಪೇಯಿ ವಿ.ವಿ., ಚಂಡೀಗಢದ ಪಂಜಾಬ್ ವಿ.ವಿ, ಜಮ್ಮುವಿನ ಜಮ್ಮು ವಿ.ವಿ. ತಂಡಗಳು ಭಾಗವಹಿಸಿವೆ.
ಮುನ್ನಡೆ
ಮೊದಲ ದಿನದ ಅಂತ್ಯಕ್ಕೆ ಚೆನ್ನೈನ ಎಸ್‌ಆರ್‌ಎಂಐಎಸ್‌ಟಿ, ಮದ್ರಾಸ್ ವಿ.ವಿ., ಕೋಲ್ಕತಾದ ಅದಮಸ್ ವಿ.ವಿ., ದಿಲ್ಲಿ ವಿ.ವಿ. ತಂಡಗಳು ತಲಾ 4 ಅಂಕಗಳೊಂದಿಗೆ ಮುಂಚೂಣಿಯಲ್ಲಿವೆ.