ಉಡುಪಿ: ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ರೂಪಿಸಬೇಕೆಂಬ ಪ್ರಧಾನಿ ಮೋದಿ ಅವರ ಹಂಬಲಕ್ಕೆ ಪೂರಕವಾಗಿ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯಕ್ಕೆ ಉತ್ಕೃಷ್ಟ ಸಂಸ್ಥೆ (IOE) ಮಾನ್ಯತೆ ದೊರಕಿದೆ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು. ಮಣಿಪಾಲದ ವ್ಯಾಲಿವ್ಯೂ ಹೊಟೇಲ್ ನಲ್ಲಿ ಮಂಗಳವಾರ ನಡೆದ ಉತ್ಕೃಷ್ಟ ಸಂಸ್ಥೆ ಮಾನ್ಯತೆ ಸಂಭ್ರಮಾಚರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಜಗತ್ತಿನಲ್ಲಿ ಮೂರನೆಯ ಅತಿ ದೊಡ್ಡ ಶಿಕ್ಷಣ ಪೂರೈಕೆದಾರ ರಾಷ್ಟ್ರವಾದರೂ ಇಲ್ಲಿ ಜಾಗತಿಕ ಸ್ತರದ ಸಂಸ್ಥೆಗಳಿಲ್ಲ. ಇದನ್ನು ಮನಗಂಡು ಪ್ರಧಾನಿಯವರು ಜಾಗತಿಕ ಪೈಪೋಟಿಯ ಸಂಸ್ಥೆಗಳನ್ನು ರೂಪಿಸಲು ಯತ್ನಿಸುತ್ತಿದ್ದಾರೆ ಎಂದರು.
ಅನ್-ಅಂಡರ್ ಎಂಪ್ಲಾಯ್ಮೆಂಟ್!
ವರ್ಷಕ್ಕೆ 15 ಲಕ್ಷ ಎಂಜಿನಿಯರುಗಳನ್ನು ವಿವಿಧ ಎಂಜಿನಿಯರಿಂಗ್ ಕಾಲೇಜುಗಳು ಉತ್ಪಾದಿಸುತ್ತಿದ್ದರೂ ಶೇ. 25 ವಿದ್ಯಾರ್ಥಿಗಳು ಉದ್ಯೋಗಾರ್ಹತೆ ಪಡೆದಿರುವುದಿಲ್ಲ. ನನ್ನ ಪ್ರಕಾರ ನಿರುದ್ಯೋಗಕ್ಕಿಂತಲೂ ಶಿಕ್ಷಣ ಪಡೆದು ಉದ್ಯೋಗಾರ್ಹತೆ ಗಳಿಸದೆ ಇರುವುದು ಹೆಚ್ಚು ಅಪಾಯಕಾರಿ ಎಂದು ಡಾ| ಬಲ್ಲಾಳ್ ಅಭಿಪ್ರಾಯಪಟ್ಟರು.
ದೇಶದ ಮೂರು ಸರಕಾರಿ ಮತ್ತು ಮೂರು ಖಾಸಗಿ ಸಂಸ್ಥೆಗಳನ್ನು ಮಾನವ ಸಂಪನ್ಮೂಲ ಇಲಾಖೆ ಗುರುತಿಸಿದ್ದು, ಮಾಹೆ ಒಂದಾಗಿದೆ. ಮಾಹೆ ವಿ.ವಿ.ಯಲ್ಲಿ 20ಕ್ಕೂ ಹೆಚ್ಚು ಆಯಾಮದ ಶಿಕ್ಷಣ ಕೋರ್ಸುಗಳಿರುವುದು ವೈಶಿಷ್ಟ್ಯ. ಇದಕ್ಕೆ ಡಾ| ಟಿ.ಎಂ.ಎ. ಪೈಯವರು ದಶಕಗಳ ಹಿಂದೆ ಹಾಕಿದ ಭದ್ರ ಬುನಾದಿಯೇ ಕಾರಣ ಎಂದು ಡಾ| ಬಲ್ಲಾಳ್ ನೆನಪಿಸಿಕೊಂಡರು.
ಉತ್ಕೃಷ್ಟ ಸಂಸ್ಥೆ ಮಾನ್ಯತೆ ದೊರಕಬೇಕಾದರೆ ಮಾಹೆ ಕುಲಪತಿ ಸಿದ್ಧಪಡಿಸಿದ ದಾಖಲೆ, ಪಟ್ಟ ಶ್ರಮ ವನ್ನು ನಿರ್ದೇಶಕ (ಗುಣಮಟ್ಟ) ಡಾ| ಸಂದೀಪ್ ಶೆಣೈ ವಿವರಿಸಿದರು. ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಸ್ವಾಗತಿಸಿ, ಕುಲಸಚಿವ ಡಾ| ನಾರಾಯಣ ಸಭಾಹಿತ್ ವಂದಿಸಿದರು. ಮಾಹೆ ಪ್ರಥಮ ಮಹಿಳೆ, ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಪೈ, ಎಂಇಎಂಜಿ ಅಧ್ಯಕ್ಷ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಡಾ| ರಂಜನ್ ಆರ್. ಪೈ, ಸಹಕುಲಪತಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಸಿ.ಎಸ್. ತಮ್ಮಯ್ಯ ಉಪಸ್ಥಿತರಿದ್ದರು. ಟೆಡ್ಡಿ ಆಂಡ್ರ್ಯೂಸ್ ಕಾರ್ಯಕ್ರಮ ನಿರ್ವಹಿಸಿದರು. ಡಾ| ಟಿಎಂಎ ಪೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಮೂರು ಕಡೆ ಮಾಹೆ ಕ್ಯಾಂಪಸ್
ಬೆಂಗಳೂರು, ಜಮ್ಶೆಡ್‌ಪುರ ಮತ್ತು ಶ್ರೀಲಂಕಾದಲ್ಲಿ ಇನ್ನೆರಡು ವರ್ಷಗಳಲ್ಲಿ ‘ಮಾಹೆ’ ವಿ.ವಿ. ಕ್ಯಾಂಪಸ್ ಗಳನ್ನು ತೆರೆಯಲಾಗುವುದು ಎಂದು ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ತಿಳಿಸಿದರು. ಉತ್ಕೃಷ್ಟ ಸಂಸ್ಥೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಗತಿಕ ಸ್ತರದ ಸಂಸ್ಥೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಮಾನವ ಸಂಪದಭಿವೃದ್ಧಿ ಇಲಾಖೆ ಮಾಹೆಯನ್ನು ಉತ್ಕೃಷ್ಟ ಸಂಸ್ಥೆಯಾಗಿ ಘೋಷಿಸಿದೆ. ಆದರೆ ಇಲ್ಲಿಗೆ ನಮ್ಮ ಸಾಧನೆ ನಿಲ್ಲುವುದಿಲ್ಲ. ಮುಂದೆ ಸಂಶೋಧನೆ, ಶೈಕ್ಷಣಿಕ ಉತ್ಕೃಷ್ಟತೆಯು ಇದುವರೆಗೆ ಇದ್ದದ್ದಕ್ಕಿಂತ ಭಿನ್ನವಾಗಿ, ವೈಶಿಷ್ಟ್ಯಪೂರ್ಣವಾಗಿ ಹೊರಹೊಮ್ಮಬೇಕು ಎಂದರು.
1975ರಲ್ಲಿ ಡಾ| ಟಿ.ಎಂ.ಎ. ಪೈಯವರು ಸರಕಾರದ ವರ್ತನೆಯಿಂದ ಬೇಸತ್ತು ಪ್ರಧಾನಿ ಮೊರಾರ್ಜಿ ದೇಸಾಯಿಯವರಿಗೆ ಪತ್ರ ಬರೆದು ‘ಮಣಿಪಾಲದ ಸಂಸ್ಥೆಯನ್ನು ತೆಗೆದುಕೊಂಡು ರಾಷ್ಟ್ರೀಕರಣ ಮಾಡಿಕೊಳ್ಳಿ’ ಎಂದರು. 2006-07ರಲ್ಲಿ ಮಾಹೆ ಇತಿಹಾಸದಲ್ಲಿ ಬೇಸರದ ವರ್ಷ. ಭಾರತೀಯ ವೈದ್ಯಕೀಯ ಮಂಡಳಿಯ ಕಿರಿಕಿರಿಯಿಂದ ಬೇಸತ್ತು ‘ಕೆಎಂಸಿಯನ್ನು ಮುಚ್ಚುತ್ತೇನೆ’ ಎಂದು ಡಾ| ರಾಮದಾಸ್ ಪೈ ಹೇಳಿದ್ದರು. ಇದು ಗುಣಮಟ್ಟಕ್ಕೆ ರಾಜಿಯಾಗದ ತಂದೆ-ಮಗನ ಇಚ್ಛಾಶಕ್ತಿಯಾಗಿತ್ತು ಎಂದು ಡಾ| ವಿನೋದ ಭಟ್ ನೆನಪಿಸಿಕೊಂಡರು.