ಹಾಸನ: ಕೋವಿಡ್-19 ಸೋಂಕು ಹರಡುವ ನಿಟ್ಟಿನಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ನಿಂದ ನಗರ, ಪಟ್ಟಣ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ವಾಪಸಾಗಿರುವವರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಲ ಸರ್ಕಾರ ಮುಂದಾಗಿದೆ.
ಉದ್ಯೋಗಕ್ಕಾಗಿ ಜಿಲ್ಲೆಯಿಂದ ನಗರ ಪ್ರದೇಶಗಳಿಗೆ ತೆರಳಿದ್ದ ತೆರಳಿದ್ದ 50 ಸಾವಿರಕ್ಕೂ ಹೆಚ್ಚು ಜನರು ನಗರಗಳಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದೇ ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ. ಇವರಲ್ಲಿ ಕೆಲವರು ಐಟಿ, ಬಿಟಿಕಂಪನಿಗಳಲ್ಲಿದ್ದರೆ ಬಹುತೇಕ ಜನರು ಗಾರ್ಮೆಂಟ್ಸ್, ಬೇಕರಿಗಳಲ್ಲಿ, ಟ್ಯಾಕ್ಸಿಗಳ ಚಾಲಕರಾಗಿ, ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗ ಗ್ರಾಮೀಣ ಪ್ರದೇಶದಲ್ಲೂ ನಿರುದ್ಯೋಗ ಕಾಡುತ್ತಿದೆ. ಹಾಗಾಗಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯನ್ನು ಬಳಸಿಕೊಳ್ಳುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಸರ್ಕಾರದ ಆದೇಶದಂತೆ 5 ಜನರಿಗಿಂತ ಹೆಚ್ಚು ಕೂಲಿಕಾರರು ಗುಂಪಾಗಿ ಕೆಲಸ ನಿರ್ವಹಿಸದಂತೆ ನಿಗಾ ವಹಿಸುವುದು ಮತ್ತು ಪರಸ್ಪರ ಸಾಕಷ್ಟು ಅಂತರವಿರುವಂತೆ ಕೆಲಸಕ್ಕೆ ನಿಯೋಜಿಸಲು ಸಂಬಂಧಿಸಿದ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.
ಜಾಬ್ ಕಾರ್ಡ್ ಇಲ್ಲದವರಿಗೂ ಉದ್ಯೋಗ: ಜಾಬ್‌ಕಾರ್ಡ್ ಹೊಂದಿಲ್ಲ ದವರು ಉದ್ಯೋಗ ಬಯಸುವುದಾದರೆ ಆಧಾರ್, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸವಿರುವ ದೃಢೀಕರಣ ಮತ್ತು ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಿದರೆ ಅವರನ್ನು ಕೂಡಲೇ ನೋಂದಣಿ ಮಾಡಿಕೊಂಡು ವಾಸಸ್ಥಳದ ಸಮೀಪ ಕೆಲಸ ನೀಡಲು ಜಿಪಂ ಸಿಇಒ ಅವರು ತಾಪಂ ಇಒ ಹಾಗೂ ಪಿಡಿಒಗಳಿಗೆ ಸುಚನೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದಾಗಿ ಕೋವಿಡ್-19 ಹಿನ್ನೆಲೆಯಲ್ಲಿ ನಗರ, ಪಟ್ಟಣ ಪ್ರದೇಶಗಳಿಂದ ಹಳ್ಳಿಗಳಿಗೆ ವಾಪಸಾಗಿರುವ ಕಾರ್ಮಿಕರು ಕೆಲಸವಿಲ್ಲವೆಂದು ಕೈ ಕಟ್ಟಿ ಕೂರದೆ ಜೀವನೋಪಾಯಕ್ಕೆ ದುಡಿಮೆಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದೆ.
ಕೊರೊನಾ ಸಂಬಂಧ ಹಳ್ಳಿಗಳಿಗೆ ವಲಸೆ ಬಂದಿರುವವರಿಗೆ ಕೆಲಸದ ಅಗತ್ಯವಿದ್ದರೆ ನರೇಗಾ ಮೂಲಕ ಕೂಲಿ ಕೆಲಸ ನೀಡಲು ಗ್ರಾಪಂಗಳ ಮೂಲಕ ಕ್ರಮ ಕೈಗೊಳ್ಳಲು ಎಲ್ಲಾ ತಾಪಂ ಇಒಗಳಿಗೆ ಮಾ.26 ರಂದು ಸುತ್ತೋಲೆ ಕಳುಹಿಸಲಾಗಿದೆ.
● ಬಿ.ಎ.ಪರಮೇಶ್, ಜಿಪಂ ಸಿಒಒ
ನಗರಗಳಿಂದ ಹಳ್ಳಿಗಳಿಗೆ ವಲಸೆ ಬಂದಿರುವ ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆಯಡಿ ಕೆಲಸ ಪಡೆಯಬಹುದಾದ ಸಾಧ್ಯತೆಯನ್ನು
ಮನವರಿಕೆ ಮಾಡಿ, ಅವರಿಗೆ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈತ ಸಂಘಟನೆ, ಜನ ಪರ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಆಸಕ್ತರು ಮುಂದೆ ಬರಬೇಕು.
● ಅಪ್ಪಾಜಿಗೌಡ, ಅಧ್ಯಕ್ಷರು, ಹಸಿರುಭೂಮಿ ಪ್ರತಿಷ್ಠಾನ
ಎನ್. ನಂಜುಂಡೇಗೌಡ