Advertisement
ಶಾಲೆಯ ದಾಖಲೆಗಳ ಪ್ರಕಾರ 1919ರಲ್ಲಿ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿತ್ತು. ಕೆನರಾ ಹೈಸ್ಕೂಲ್ ಮ್ಯೂಸಿಯಂ ಎಂದು ನಾಮಕರಣವಿತ್ತು. ಬಳಿಕ ಶಾಲೆಯ ಆವರಣದಲ್ಲಿರುವ ಸುಬ್ಬರಾವ್ ಪೈ ಸ್ಮಾರಕ ಭವನದ ಕಲಾತ್ಮಕ ಬಾಲ್ಕನಿಯಲ್ಲಿ ಮ್ಯೂಸಿಯಂ ನಡೆಯಿತು.
Related Articles
Advertisement
1935ರಲ್ಲಿ ಹೊಸ ಕಟ್ಟಡ ಉದ್ಘಾಟನೆ 1934 ಮಾ. 31ರಂದು ಇಲ್ಲಿನ ಕಟ್ಟಡದ ಭೂಮಿಪೂಜೆ ನಡೆದು, 1935 ಅ. 15ರಂದು ಉದ್ಘಾಟನೆ ಆಗಿತ್ತು. ಅಂದಿನ ಮದ್ರಾಸ್ ಗವರ್ನರ್ ಲಾರ್ಡ್ ಇರ್‌ಸ್ಕಿನ್ ಉದ್ಘಾಟಿಸಿದ್ದರು.
ಇದಕ್ಕೂ ಮುನ್ನ ಅವರಿಗೆ ಶಾಲಾಡಳಿತದಿಂದ ಕಳುಹಿಸಲಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಮ್ಯೂಸಿಯಂ ಬಗ್ಗೆ ಉಲ್ಲೇಖ ಮಾಡಲಾಗಿತ್ತು. “ಕಟ್ಟಡದ ಕೆಳ ಭಾಗದಲ್ಲಿ ಶಾಲೆಯ ಗ್ರಂಥಾಲಯ ಹಾಗೂ ಮೇಲ್ಭಾಗದಲ್ಲಿ ಮ್ಯೂಸಿಯಂ ಇದೆ. ಮಕ್ಕಳ ಬೌದ್ಧಿಕ ಆಸಕ್ತಿಗೆ ಉತ್ತೇಜ ನದಾಯಕ ಸಂಗತಿಗಳು ಇಲ್ಲಿವೆ. ಕಟ್ಟಡದ ಕೆಳ ಅಂತಸ್ತು 2,400 ಚ.ಅಡಿ ಇದ್ದು, ಮೇಲ್ಭಾಗದ ಬಾಲ್ಕನಿ 1520 ಚ.ಅಡಿ ಇದೆ. ಸುಮಾರು 10 ಸಾವಿರ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ಅಮೂಲ್ಯ ವಸ್ತುಗಳ ಸಂಗ್ರಹಗಾರ
ಮ್ಯೂಸಿಯಂನಲ್ಲಿ ವಿವಿಧ ರೀತಿಯ ಜಿಂಕೆಯ ಕೊಂಬುಗಳ ಸಹಿತ ಪ್ರಾಣಿಗಳ ಅಸ್ಥಿಪಂಜರಗಳು, ಆಮೆ ಚಿಪ್ಪುಗಳು, ಆಸ್ಟ್ರಿಚ್ ಮೊಟ್ಟೆಗಳು, ಚಿಪ್ಪುಗಳು, ಹವಳಗಳು, ಪ್ರಾಣಿಗಳ ಹಲ್ಲು, ಉಗುರುಗಳ ಸಂಗ್ರಹವಿತ್ತು. ಕರೆನ್ಸಿ, ಪ್ರತಿಮೆಗಳು, ಪಾತ್ರೆಗಳು, ಪುರಾತನ ಗ್ಯಾಜೆಟ್, ಹಳೆಯ ರೇಡಿಯೋ, ತಾಳೆ ಎಲೆಗಳ ಮೇಲೆ ಬರೆದ ಶಾಸನಗಳ ಸಹಿತ ಹಲವು ಅಮೂಲ್ಯ ವಸ್ತುಗಳು ಕೇಂದ್ರದಲ್ಲಿತ್ತು. ಮ್ಯೂಸಿಯಂ ಪುನಃಶ್ಚೇತನದ ಹಿನ್ನೆಲೆಯಲ್ಲಿ ಅಮೂಲ್ಯ ವಸ್ತುಗಳನ್ನು ಹೈಸ್ಕೂಲ್‌ನಲ್ಲಿ ಪ್ರತ್ಯೇಕವಾಗಿ ಜೋಡಿಸಿಡಲಾಗಿದೆ. ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ಅಮೂಲ್ಯ ವಸ್ತುಗಳು -ಆರ್ಥಿಕವಾಗಿ ನೆರವಾಗುತ್ತಿದ್ದಾರೆ.
ಹಳೆ ವಿದ್ಯಾರ್ಥಿಗಳಿಂದ ಸ್ಪಂದನೆ: ಕೆನರಾ ಶಿಕ್ಷಣ ಸಂಸ್ಥೆಯಲ್ಲಿರುವ ಮಹಾತ್ಮಾಗಾಂಧಿ ಮ್ಯೂಸಿಯಂನ ಮೂಲಸ್ವರೂಪವನ್ನು ಹಾಗೆಯೇ ಇರಿಸಿ ಪುನಃಶ್ಚೇತನ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹಳೆ ವಿದ್ಯಾರ್ಥಿಗಳು ತಮ್ಮ ಸಂಗ್ರಹದ ಹಳೆಯ ಕಾಲದ ಅಮೂಲ್ಯ ವಸ್ತುಗಳನ್ನು ನೀಡಬಹುದಾಗಿದೆ. ಕೆನರಾ ಸಂಸ್ಥೆ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನವಾದ ನ. 19ರಂದು ಇದರ ಲೋಕಾರ್ಪಣೆಗೊಳ್ಳಲಿದೆ. –ನರೇಶ್ ಶೆಣೈ, ಆಡಳಿತ ಮಂಡಳಿ ಸದಸ್ಯರು ಕೆನರಾ ಹೈಸ್ಕೂಲ್ ಅಸೋಸಿಯೇಶನ್-ಮಂಗಳೂರು