ಮುಂಬಯಿ: ಮಹಾಸ್ವರಾಜ್ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಮುಂಬಯಿ ಇದರ ಷೇರು ಅಪ್ಲಿಕೇಶನ್ ಬಿಡುಗಡೆಯ ಸಮಾರಂಭವು ಜು. 8 ರಂದು ಕುರ್ಲಾ ಪೂರ್ವದ ಬಂಟರ ಭವನದ ಸಂಕುಲದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜ್ಞಾನಮಂದಿರದಲ್ಲಿ ನಡೆಯಿತು.
ಮುಂಬಯಿಯ ಸಂತೋಷ್ ಕ್ಯಾಟರರ್ಸ್ ನ ಮಾಲಕರಾದ ರಾಘು ಪಿ. ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಷೇರು ಅಪ್ಲಿಕೇಶನ್ ಬಿಡುಗಡೆಗೊಳಿಸಿ ಮಾತನಾಡಿ, 1991ರಲ್ಲಿ ಉಡುಪಿಯ ಅಂಬಾಗಿಲಿನಲ್ಲಿ ಸಣ್ಣಮಟ್ಟದಲ್ಲಿ ಪುರಂದರ ಶೆಟ್ಟಿ ಅವರಿಂದ ಪ್ರಾರಂಭಗೊಂಡ ಆರ್ಥಿಕ ಸಂಸ್ಥೆಯು ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣುತ್ತಾ ಇದೀಗ ಸಹಕಾರ ಕ್ಷೇತ್ರಕ್ಕೆ ಪ್ರವೇಶವಾಗುತ್ತಿರುವುದು ಅಭಿನಂದನೀಯವಾಗಿದೆ. ಇಂದು ಸಂಸ್ಥೆಯ ಷೇರು ಅಪ್ಲಿಕೇಶನ್ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ನನ್ನ ಕೈಯಿಂದ ಬಿಡುಗಡೆ ಆಗುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಮುಂಬಯಿ, ಪುಣೆ, ಕಲ್ಯಾಣ್‌ಗಳಲ್ಲಿ ಷೇರು ಬಿಡುಗಡೆಗೊಳ್ಳಲಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಈ ಸಂಸ್ಥೆಯು ಅಭಿವೃದ್ಧಿಯನ್ನು ಕಾಣಲಿ ಎಂದರು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾದ ವಿದ್ವಾನ್ ಅರವಿಂದ್ ಬನ್ನಿಂತಾಯ ಆಶೀರ್ವಚನ ನೀಡಿ, ಶ್ರೀ ದೇವರ ಸನ್ನಿಧಿಯಲ್ಲಿ ಪುರಂದರ ಶೆಟ್ಟಿ ನೇತೃತ್ವದ ಮಹಾಸ್ವರಾಜ್ ಕ್ರೆಡಿಟ್ ಕೋ. ಆಪರೇಟಿವ್ ಲಿಮಿಟೆಡ್‌ನ ಷೇರು ಅಪ್ಲಿಕೇಶನ್ ಬಿಡುಗಡೆ ಯಾಗುತ್ತಿರುವುದು ಸಂತಸದ ವಿಚಾರವಾಗಿದೆ. ಪ್ರಾಮಾಣಿಕವಾಗಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಸಂಸ್ಥೆಯು ತೊಡಗಿಸಿಕೊಳ್ಳುವುದರಿಂದ ದೇವರ ಅನುಗ್ರಹವೂ ಪ್ರಾಪ್ತವಾಗುವುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ಈ ಸಂಸ್ಥೆ ಸೇವೆ ನೀಡುವಂತಾಗಲಿ. ದೇವರ ಅನುಗ್ರಹವಿರಲಿ ಸದಾಯಿರಲಿ ಎಂದರು.
ಈ ಸಂದರ್ಭ ಮುಂಬಯಿ ಬಂಟರ ಸಂಘದ ಸಿಟಿ ರೀಜನ್ ಮಾಜಿ ಕಾರ್ಯಾಧ್ಯಕ್ಷ ಭುಜಂಗ ಶೆಟ್ಟಿ ಸಂಸ್ಥೆಗೆ ಶುಭವನ್ನು ಕೋರಿದರು. ಮಹಾಸ್ವರಾಜ್ ಕ್ರೆಡಿಟ್ ಕೋ. ಆಪರೇಟಿವ್ ಲಿಮಿಟೆಡ್ ಮುಂಬಯಿ ಇದರ ಅಧ್ಯಕ್ಷರಾದ ಬಿ. ಪುರಂದರ ಶೆಟ್ಟಿಯವರು ಅತಿಥಿಗಳನ್ನು ಸತ್ಕರಿಸಿ ವಂದನೆಗಳನ್ನು ಸಲ್ಲಿಸಿದರು.
ಸಂಜೆ ನವಿಮುಂಬಯಿಯ ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದಲ್ಲಿ ಉದ್ಯಮಿ ಸಿಬಿಡಿ ಭಾಸ್ಕರ ಶೆಟ್ಟಿಯವರು ಷೇರು ಅಪ್ಲಿಕೇಶನ್ ಬಿಡುಗಡೆಗೊಳಿಸಿ ಶುಭ ಕೋರಿದರು. ದೇವಸ್ಥಾನದ ಧರ್ಮದರ್ಶಿ ಅಣ್ಣಿ ಶೆಟ್ಟಿ, ಕಲಾಸಾರಥಿ ಕರ್ನೂರು ಮೋಹನ್ ರೈ, ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ವ್ಯವಸ್ಥಾಪಕರಾದ ನರೋತ್ತಮ ಜಿ. ಖೀರ್, ನವಿಮುಂಬಯಿಯ ಜ್ಯೋತಿಷ್ಯರಾದ ನಯನ್ ಎನ್. ಖೀರ್ ಉಪಸ್ಥಿತರಿದ್ದು ಸಂಸ್ಥೆಗೆ ಶುಭವನ್ನು ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಬಿ. ಪುರಂದರ ಶೆಟ್ಟಿ, ಆಡಳಿತ ನಿರ್ದೇಶಕ ಕಾರ್ತಿಕ್ ಶೆಟ್ಟಿ, ನಿರ್ದೇಶಕಿ ತಪಸ್ಯಾ ಶೆಟ್ಟಿ ಉಪಸ್ಥಿತರಿದ್ದು ಅತಿಥಿಗಳನ್ನು ಸತ್ಕರಿಸಿದರು.