Advertisement

ಇಂದು ಕರಾವಳಿಯಾದ್ಯಂತ ಮಹಾಶಿವರಾತ್ರಿ…ಧರ್ಮಸ್ಥಳದಲ್ಲಿ ಭಕ್ತರ ಗಡಣ

11:08 PM Feb 17, 2023 | Team Udayavani |

ಮಂಗಳೂರು/ಉಡುಪಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಶಿವನ ದೇವಸ್ಥಾನಗಳಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

Advertisement

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಶ್ರೀ ಮಂಗಳಾದೇವಿ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ಕ್ಷೇತ್ರ, ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾ ನ ಸೇರಿದಂತೆ ನಗರದ ವಿವಿಧ ಸನ್ನಿಧಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.

ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನದಲ್ಲಿ ಈಗಾಗಲೇ ಜಾತ್ರೆ ಆರಂಭಗೊಂಡಿದ್ದು, ಶಿವರಾತ್ರಿ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಶಿವಮಾಲಾಧಾರಣೆ ಸಂಕೀರ್ತನೆ ನಡೆಯಲಿದೆ. ನರಹರಿ ಪರ್ವತ ಕ್ಷೇತ್ರದಲ್ಲಿ ವಿಶೇಷ ಪೂಜೆ, ಜಾಗರಣೆ, ಭಜನೆ ನಡೆಯಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ನೆಟ್ಲ ದೇವಸ್ಥಾನ, ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಒಡಿಯೂರು, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಜಿರೆ ಜನಾರ್ದನ ದೇವಸ್ಥಾನ, ಸುರ್ಯ ಸದಾಶಿವರುದ್ರ ದೇವಸ್ಥಾನ ಸೇರಿದಂತೆ ಸೇರಿದಂತೆ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಶಿವಪಂಚಾಕ್ಷರಿ ಪಠಣ ಸಂಜೆ 6ಕ್ಕೆ ಚಾಲನೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 18ರಂದು ಸಂಜೆ 6ಕ್ಕೆ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿಯಿಂದ ಮುಂಜಾನೆ ವರೆಗೆ ಭಕ್ತರು ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ಮಾಡಲಿದ್ದಾರೆ.

ರಾತ್ರಿಯಿಡೀ ದರ್ಶನ
ದೇವಸ್ಥಾನದಲ್ಲಿ ಸಂಜೆ 6ರಿಂದ ನಾಲ್ಕು ಜಾವಗಳಲ್ಲಿ ಅಹೋರಾತ್ರಿ ಭಕ್ತರು ಶತರುದ್ರಾಭಿಷೇಕ, ಎಳನೀರು ಅಭಿಷೇಕ ಸೇವೆ ನಡೆಯಲಿದೆ. ರಾತ್ರಿಯಿಡೀ ದೇವರ ದರ್ಶನಕ್ಕೆ ಅವಕಾಶವಿದ್ದು, ರವಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.

Advertisement

ಉಡುಪಿಯಲ್ಲೂ ವಿಶೇಷ ಪೂಜೆ
ಉಡುಪಿ: ಮಹಾಶಿವರಾತ್ರಿ ಆಚರಣೆ ಪ್ರಯುಕ್ತ ಶನಿವಾರ ನಾಡಿನ ಎಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಭಕ್ತರು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ದೇವಸ್ಥಾನಗಳ ಆಡಳಿತ ಮಂಡಳಿಗಳು ಇದಕ್ಕೆ ಬೇಕಾದ ಸಿದ್ಧತೆ ನಡೆಸಿವೆ. ಬಿಲ್ವಪತ್ರೆ ಪ್ರಿಯನಾದ ಕಾರಣ ಬಿಲ್ವಾರ್ಚನೆ, ಅಭಿಷೇಕ ಪ್ರಿಯನಾದ ಕಾರಣ ಶತರುದ್ರಾಭಿಷೇಕಗಳು, ರುದ್ರ, ಚಮಕ ಪಾರಾಯಣಗಳು ನಡೆಯಲಿವೆ. ಕೆಲವು ದೇವಸ್ಥಾನಗಳಲ್ಲಿ ವಾರ್ಷಿಕ ರಥೋತ್ಸವವೂ ಇದೇ ಸಮಯದಲ್ಲಿ ನಡೆಯಲಿದ್ದು ಮರು ದಿನ ಭೋಜನ ಪ್ರಸಾದವನ್ನು ಏರ್ಪಡಿಸಲಾಗಿದೆ. ಕೆಲವು ದೇವಸ್ಥಾನಗಳಲ್ಲಿ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಮನೆಮನೆಗಳಲ್ಲಿಯೂ ಉಪವಾಸವಿದ್ದು ವಿಶೇಷ ಪೂಜೆಗಳನ್ನು ನಡೆಸುತ್ತಾರೆ ಮತ್ತು ಮನೆಗಳಲ್ಲಿಯೂ ರುದ್ರ ಪಾರಾಯಣಗಳನ್ನು ನಡೆಸುತ್ತಾರೆ. ರಾತ್ರಿ ಜಾಗರಣೆ ನಡೆಸಲಾಗುತ್ತದೆ.

ಶಿವರಾತ್ರಿಗೆ ಧರ್ಮಸ್ಥಳದಲ್ಲಿ ಭಕ್ತರ ಗಡಣ
ಬೆಳ್ತಂಗಡಿ: ಶಿವಾರಾಧನೆಯ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಶನಿವಾರ ನಡೆಯುವ ಶಿವರಾತ್ರಿ ಆಚರರಣೆ ಪ್ರಯುಕ್ತ ಶುಕ್ರವಾರ ರಾತ್ರಿಯೇ ಭಕ್ತರು ಕ್ಷೇತ್ರ ಸಂದರ್ಶಿಸಿದ್ದಾರೆ.
ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಭದ್ರಾವತಿ, ಹಾಸನ, ದಾವಣಗೆರೆ ಮೊದಲಾದ ಊರುಗಳಿಂದ ಪ್ರತಿ ವರ್ಷದಂತೆ ವಿವಿಧ ಪಾದಯಾತ್ರಿಗಳ ಸಂಘಟನೆಗಳ ಮೂಲಕ ಭಕ್ತರು ಶಿವನಾಮ ಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸಿದ್ದಾರೆ. ಶಿವರಾತ್ರಿ ಪ್ರಯುಕ್ತ ಕ್ಷೇತ್ರವನ್ನು ಈಗಾಗಲೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಈಗಾಗಲೆ ಕ್ಷೇತ್ರಕ್ಕೆ 50 ಸಾವಿರ ಮಂದಿ ಪಾದಯಾತ್ರಿಗಳು ಆಗಮಿಸಿದ್ದು ಕ್ಷೇತ್ರದ ವಿವಿಧೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next