Advertisement

ಮಹರ್ಷಿ ವಾಲ್ಮೀಕಿಗೆ ಜಿಲ್ಲೆಯ ನಮನ

12:30 PM Oct 06, 2017 | |

ರಾಮಾಯಣ ಮಹಾಕಾವ್ಯದ ಮೂಲಕ ಭಾರತದ ಸಂಸ್ಕೃತಿಯನ್ನು ತಿಳಿಸಿಕೊಟ್ಟ ಹಾಕಿಕೊಟ್ಟ, ದುರ್ಬಲರು, ಸ್ತ್ರೀಯರ ರಕ್ಷಣೆ -ಸಂಕಷ್ಟದ ಕುರಿತು ಗಮನ ಸೆಳೆದಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀರಾಮ ಎಂದರೆ ಪಿತೃವಾಕ್ಯ ಪರಿಪಾಲಕ, ಏಕ ಪತ್ನಿ ವ್ರತಸ್ಥ, ಮರ್ಯಾದ ಪುರುಷೋತ್ತಮ ಎನ್ನುವ ಪವಿತ್ರ ಬಾಂಧವ್ಯ ತಿಳಿಸಿದ ವಾಲ್ಮೀಕಿಗೆ ಗಣ್ಯರು ಪುಷ್ಪನಮನ ಸಲ್ಲಿಸಿ ಯುವಕರು ವಾಲ್ಮೀಕಿ ತತ್ವಾದರ್ಶ ಪಾಲಿಸಲು ಕರೆ ನೀಡಿದರು.  

Advertisement

ಮೈಸೂರು: ರಾಜ್ಯಸರ್ಕಾರ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಿರುವಂತೆ, ಮೈಸೂರು ನಗರದಲ್ಲೂ ವಾಲ್ಮೀಕಿ ಪ್ರತಿಮೆ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಭವನ ನಿರ್ಮಿಸಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದರು.

ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಮಹಾ ನಗರಪಾಲಿಕೆ, ಮುಡಾ ಮತ್ತು ಮೈಸೂರು ತಾಲೂಕು ಹಾಗೂ ನಗರ ನಾಯಕ ಜನಾಂಗದ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆ, ವಾಲ್ಮೀಕಿ ಪೀಠದ ಮಠ ಸ್ಥಾಪನೆಗೆ ಅನುದಾನ ನೀಡಿದ್ದನ್ನು ಸ್ಮರಿಸಿದ ಅವರು, ಬೆಂಗಳೂರಿನಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸುವ ಮೂಲಕ ಸಿದ್ದರಾಮಯ್ಯ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಅದೇ ರೀತಿ ಮುಂದಿನ ವರ್ಷದ ಜಯಂತಿ ವೇಳೆಗೆ ಮೈಸೂರಿನಲ್ಲಿ ವಾಲ್ಮೀಕಿ ಪ್ರತಿಮೆ ಹಾಗೂ ತಾಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಮುಂದಾಗಲಿ ಎಂದರು.

ಜಿಲ್ಲೆಯಲ್ಲಿ ನಾಯಕ ಜನಾಂಗದವರಿಗೆ ಪರಿಶಿಷ್ಟ ವರ್ಗದ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಸಾಕಷ್ಟು ಅಡಚಣೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದರು. ಶಾಸಕ ಎಂ.ಕೆ.ಸೋಮಶೇಖರ್‌, ರಾಮಾಯಣ ಮಹಾಕಾವ್ಯದ ಮೂಲಕ ಭಾರತದ ಸಂಸ್ಕೃತಿಗೆ ತಳಹದಿ ಹಾಕಿಕೊಟ್ಟ ಮಹರ್ಷಿ ವಾಲ್ಮೀಕಿ, ಸೂರ್ಯ-ಚಂದ್ರ ಇರುವವರೆಗೂ ಅಜರಾಮರ ಎಂದರು.

Advertisement

ದುರ್ಬಲರು, ಸ್ತ್ರೀಯರ ರಕ್ಷಣೆ ಬಗ್ಗೆ, ಸ್ತ್ರೀ ಪೀಡಕರಿಗೆ ಏನೆಲ್ಲಾ ಸಂಕಷ್ಟಗಳು ಬರುತ್ತವೆ ಎಂಬುದನ್ನು ವಾಲ್ಮೀಕಿಯವರು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಶ್ರೀರಾಮ ಎಂದರೆ ಪಿತೃವಾಕ್ಯ ಪರಿಪಾಲಕ, ಏಕ ಪತ್ನಿ ವ್ರತಸ್ಥ, ಮರ್ಯಾದ ಪುರುಷೋತ್ತಮ ಎನ್ನುವ ಪವಿತ್ರ ಬಾಂಧವ್ಯಗಳನ್ನು ವಾಲ್ಮೀಕಿ ಅಂದೇ ಕಟ್ಟಿ ಕೊಟ್ಟಿದ್ದಾರೆಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಾಸು, ಮೈಸೂರಿನಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಸಂಬಂಧ ನಗರಪಾಲಿಕೆಗೆ ಪತ್ರ ಬರೆದಿದ್ದೆ. ಜಾಗದ ಸಮಸ್ಯೆ ಎದುರಾಗಿದ್ದರಿಂದ ವಿಳಂಬವಾಗಿತ್ತು. ಇದೀಗ ಜಿಲ್ಲಾಧಿಕಾರಿಯವರು ಜಾಗ ಗುರುತು ಮಾಡಿದ್ದಾರೆ. ಹೀಗಾಗಿ ಶೀಘ್ರ ಪ್ರತಿಮೆ ಸ್ಥಾಪನೆ ಕಾರ್ಯ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ವಿವಿ ಪ್ರಾಧ್ಯಾಪಕ ಡಾ.ಸುತ್ತೂರು ಎಸ್‌.ಮಾಲಿನಿ, ಮೇಯರ್‌ ಎಂ.ಜೆ.ರವಿಕುಮಾರ್‌, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್‌, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪ ಮೇಯರ್‌ ರತ್ನಲಕ್ಷ್ಮಣ್‌, ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಡಾ.ಪುಷ್ಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಜಿಲ್ಲಾಧಿಕಾರಿ ರಂದೀಪ್‌ ಮತ್ತಿತರರಿದ್ದರು.

ಅದ್ಧೂರಿ ಮೆರವಣಿಗೆ: ಇದಕ್ಕೂ ಮುನ್ನ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಕಲಾಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಅದ್ಧೂರಿ ಮೆರವಣಿಗೆ ನಡೆಯಿತು.

ಕುಣಿದು ಕುಪ್ಪಳಿಸಿದ ಜಿಟಿಡಿ: ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೆರವಣಿಗೆಗೆ ಚಾಲನೆ ನೀಡಿದ ನಂತರ ತಮಟೆ ಸದ್ದಿನಿಂದ ಪ್ರೇರಿತರಾದ ಶಾಸಕ ಜಿ.ಟಿ.ದೇವೇಗೌಡ ಅವರು ಕುಣಿದು ಕುಪ್ಪಳಿಸಿದರು. ರಾಮಾಯಣ ನಾಟಕದಲ್ಲಿ ತಾವು ಆಂಜನೇಯನ ಪಾತ್ರ ಮಾಡಿದ್ದನ್ನೂ ಅವರು ಇದೇ ವೇಳೆ ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next