ವಾಡಿ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣಕ್ಕೆ ಮಹಾರಾಷ್ಟ್ರ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಹೊಟ್ಟೆ ಹೊರೆಯಲು ಮುಂಬೈ ಮತ್ತು ಪುಣೆ ನಗರಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಕಲ್ಯಾಣ ನಾಡಿನ ಸಾವಿರಾರು ಕೂಲಿ ಕಾರ್ಮಿಕರು ಊರಿಗೆ ವಾಪಸ್ಸಾಗುತ್ತಿದ್ದಾರೆ. ಕಳೆದ ವರ್ಷ ಇದೇ ತಿಂಗಳಲ್ಲಿ ಇಡೀ ದೇಶಕ್ಕೆ ಸರ್ಕಾರ ಲಾಕ್ ಹಾಕಿ ಗುಳೆ ಕಾರ್ಮಿಕರ ಗೋಳಾಟಕ್ಕೆ ಕಾರಣವಾಗಿತ್ತು.
ಗಂಟುಮೂಟೆ ಹೊತ್ತುಕೊಂಡು ಮಕ್ಕಳೊಂದಿಗೆ ಸಾವಿರಾರು ಕಿಲೋ ಮೀಟರ್ ದೂರದ ರಸ್ತೆ ಕ್ರಮಿಸುವ ಮೂಲಕ ರಾಜ್ಯದ ಕಾರ್ಮಿಕರು ನರಕಯಾತನೆ ಅನುಭವಿಸಿದ್ದರು. ವಾಹನ ವ್ಯವಸ್ಥೆಯಿಲ್ಲದೆ ನಡೆದು ನಡೆದು ಹಲವರು ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದರು. ಮೂರ್‍ನಾಲ್ಕು ತಿಂಗಳು ಅನ್ನ, ನೀರಿಲ್ಲದೆ ಪರದಾಡಿದ್ದ ಕಲ್ಯಾಣ ನಾಡಿನ ಗುಳೆ ಕಾರ್ಮಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುವ ಮೂಲಕ ರಕ್ಷಣೆ ಮಾಡುವಂತೆ ಮೊರೆಯಿಟ್ಟ ಪ್ರಸಂಗವೂ ನಡೆದಿತ್ತು. ಆ ಕೆಟ್ಟ ಗಳಿಗೆ ಮತ್ತೂಮ್ಮೆ ಬರಬಾರದು ಎನ್ನುವ ಕಾರಣಕ್ಕೆ ವಲಸಿಗರು ರೈಲು ಮೂಲಕ ತಮ್ಮ ಹುಟ್ಟೂರಿಗೆ ವಾಪಸ್ಸಾಗುತ್ತಿದ್ದಾರೆ.
ಕೊರೊನಾ ಸೋಂಕು ಆವರಿಸಿದ ಮಹಾರಾಷ್ಟ್ರದಲ್ಲಿ ಬದುಕು ಬೇಡವಾಗಿ ಕರ್ನಾಟಕದ ಜನರು ಮಹಾನಗರಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಿಗೆ ವಲಸಿಗರ ಆಗಮನವಾಗುತ್ತಿದೆ. ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಗ್ರಾಮಗಳು ಮತ್ತು ತಾಂಡಾಗಳು ವಲಸಿಗರ ವಾಪಸ್ಸಾತಿಯಿಂದ ಗಿಜುಗುಡುತ್ತಿವೆ. ಮಹಾರಾಷ್ಟ್ರದಿಂದ ಬರುವ ಎಲ್ಲ ರೈಲುಗಳಿಂದ ಗುಳೆ ಕಾರ್ಮಿಕರು ಇಳಿಯುತ್ತಿರುವುದೇ ಕಂಡುಬರುತ್ತಿದೆ. ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ಗಳು ಗುಳೆ ಕಾರ್ಮಿಕರಿಂದ ಭರ್ತಿಯಾಗುತ್ತಿವೆ.
ವಾಡಿಯಲ್ಲಿ ರೈಲುಗಳಿಂದ ಇಳಿಯುತ್ತಿರುವ ಪ್ರತಿಯೊಬ್ಬ ಮಹಾ ವಲಸಿಗರ ಥರ್ಮಲ್ ಸ್ಕ್ರೀನಿಂಗ್‌ನ್ನು ಆರೋಗ್ಯ ಸಿಬ್ಬಂದಿಗಳಾದ ಎಸ್ತರಾರಾಣಿ ಮತ್ತು ಸುಧಾರಾಣಿ ಮಾಡುತ್ತಿದ್ದಾರೆ. ನಾಲವಾರ, ಯಾಗಾಪುರ, ವಾಡಿ, ಹಳಕರ್ಟಿ, ಲಾಡ್ಲಾಪುರ, ಯರಗೋಳ ವಲಯದ ವಿವಿಧ ತಾಂಡಾಗಳಿಗೆ ಸೇರಿದ ಬಂಜಾರಾ ಸಮುದಾಯದ ಗುಳೆ ಕಾರ್ಮಿಕರ ಆಗಮನವೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷವಾಗಿದೆ. ಒಟ್ಟಾರೆ ವಲಸಿಗ ಕಾರ್ಮಿಕರ ಬದುಕು ಲಾಕೌನ್ ಆತಂಕದಿಂದ ಮತ್ತೂಮ್ಮೆ ಒಕ್ಕಲೇಳುವಂತಾಗಿದೆ.
ಕಳೆದ ವರ್ಷದ ಲಾಕ್ ಡೌನ್ ದಿಂದ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಬಂಜಾರಾ ಜನಾಂಗದ ಅತಿಹೆಚ್ಚಿನ ಕಾರ್ಮಿಕರು ಸಾರಿಗೆ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸಿದ್ದರು. ಈಗ ಮತ್ತೆ ಲಾಕ್ ಡೌನ್ ಆಗಿದ್ದರಿಂದ ಸಹಜವಾಗಿ ವಲಸಿಗರಲ್ಲಿ ಆತಂಕ ಮನೆಮಾಡಿದೆ. ಹೀಗಾಗಿ ಅನೇಕ ಕುಟುಂಬಗಳು ವಾಪಸ್ಸಾಗುತ್ತಿವೆ. ಮಹಾರಾಷ್ಟ್ರ ಸರ್ಕಾರ ಈ ಬಾರಿ ಗುಳೆ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಮಹಾರಾಷ್ಟ್ರದಲ್ಲಿಯೇ ಉಳಿಯಲು ಬಯಸಿದವರಿಗೆ ಆಹಾರ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಬೇಕು. ವಾಪಸ್ಸಾಗಲು ಬಯಸಿದವರಿಗೆ ಸಾರಿಗೆ ವ್ಯವಸ್ಥೆ ಒದಗಿಸುವ ಮೂಲಕ ಗೌರಯುತವಾಗಿ ಬೀಳ್ಕೊಡಬೇಕು.
ಶಿವರಾಮ ಪವಾರ,
ಅಧ್ಯಕ್ಷ, ಬಂಜಾರಾ ಸಮಾಜ
*ಮಡಿವಾಳಪ್ಪ ಹೇರೂರ