Advertisement

ನೀರಿನ ಸದ್ಬಳಕೆಗೆ ಮಹಾರಾಷ್ಟ್ರ ಮಾದರಿ ಜಲಕ್ರಾಂತಿ

10:57 PM Jun 21, 2019 | Lakshmi GovindaRaj |

ಚಂಡರಕಿ (ಯಾದಗಿರಿ): “ಗ್ರಾಮಗಳು ನೀರಿನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೆಲವು ಯೋಜನೆಗಳನ್ನು ರೂಪಿಸಲು ಮುಂದಾಗಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಗುರುಮಿಠಕಲ್‌ ವಿಧಾನಸಭಾ ಕ್ಷೇತ್ರದ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಮಹಾರಾಷ್ಟ್ರದ ಮರಾಠಾವಾಡದ ಕಡವಂಚಿ ಗ್ರಾಮದಲ್ಲಿ ನೀರಿನ ಸದ್ಬಳಕೆಯಲ್ಲಿ ಜಲಕ್ರಾಂತಿ ಮಾಡಿರುವುದನ್ನು ಅಧಿಕಾರಿಗಳು ಅಧ್ಯಯನ ಮಾಡಿ ಬಂದಿದ್ದಾರೆ. ಇದನ್ನು ರಾಜ್ಯದಲ್ಲಿ ಕಾರ್ಯಾನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ಕಡವಂಚಿ ಗ್ರಾಮವು ಹನಿ ನೀರಿನ ಮೌಲ್ಯವನ್ನು ಅರಿತವರಿಂದ ಈ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಲಾಗಿದೆ. ಇದರಿಂದ ಗ್ರಾಮವು ವರ್ಷಕ್ಕೆ 70 ಕೋಟಿ ರೂ. ದ್ರಾಕ್ಷಿ ವಹಿವಾಟು ನಡೆಸುತ್ತಿದೆ. ಇಂತಹ ಬರಗಾಲದಲ್ಲೂ ನೀರಿನ ಸಮೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಕೃಷಿ ಕ್ಷೇತ್ರ ಸಹ ಬಲಗೊಳಿಸುವ ನಿಟ್ಟಿನಲ್ಲಿ ನೀರಿನ ಸದ್ಬಳಕೆ ಮುಖ್ಯವಾಗಿದೆ ಎಂದರು.

ಗಿಮಿಕ್‌ ಅಲ್ಲ: 12 ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಮಾಡಿ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದೆ. ಇದೇ ಉದ್ದೇಶದಿಂದ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದು, ಪ್ರತಿ ತಿಂಗಳು ಕೈಗೊಳ್ಳುತ್ತೇನೆ. ಶಾಸಕರಿಗೂ ಗ್ರಾಮ ವಾಸ್ತವ್ಯ ಮಾಡುವಂತೆ ಸೂಚಿಸಿದ್ದೇನೆ. ಜನತಾದರ್ಶನ ಸಹ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ 119 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ತದನಂತರ ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪೂರ, ಪ್ರಿಯಾಂಕ್‌ ಖರ್ಗೆ, ವೆಂಕಟರಾವ ನಾಡಗೌಡ, ಶಾಸಕರಾದ ನಾಗನಗೌಡ ಕಂದಕೂರ, ಶರಣಬಸಪ್ಪಗೌಡ ದರ್ಶನಾಪುರ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪ ಮಟ್ಟೂರ, ಬೋಜೆಗೌಡ, ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.

Advertisement

ಸಾಕ್ಷ್ಯಚಿತ್ರ ವೀಕ್ಷಿಸಿದ ಸಿಎಂ: ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನ ಚಾಲನೆ ಕಾರ್ಯಕ್ರಮ ಮುಗಿದ ನಂತರ ಸಮಾರಂಭ ವೇದಿಕೆ ಮೇಲೆ ಸಿಎಂ ಕುಮಾರಸ್ವಾಮಿ ವಾರ್ತಾ ಇಲಾಖೆ ನಿರ್ಮಿಸಿದ ಮಹಾರಾಷ್ಟ್ರ ಮರಾಠಾವಾಡದ ಕುಡವಂಟಿ ಗ್ರಾಮದ ಜಲಕ್ರಾಂತಿಯ ಸಾಕ್ಷ್ಯಚಿತ್ರವನ್ನು ಜನತಾ ದರ್ಶನಕ್ಕೆ ಆಗಮಿಸಿದ್ದ ಜನತೆಯೊಂದಿಗೆ ವೀಕ್ಷಿಸಿದರು.

ಯಾದಗಿರಿಗೆ ಬಂಪರ್‌ ಕೊಡುಗೆ: ಯಾದಗಿರಿ ಜಿಲ್ಲಾಸ್ಪತ್ರೆಯನ್ನು 100 ಬೆಡ್‌ನಿಂದ 300 ಬೆಡ್‌ವರೆಗೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇದಕ್ಕೆ ಅಡಿಗಲ್ಲು ನೆರವೇರಿಸಲಾಗುವುದು.

ಯಾದಗಿರಿ ಜಿಲ್ಲೆಯ ಪ್ರತಿ ಹಳ್ಳಿಗೂ ನದಿ ಮೂಲಗಳಿಂದ ಕುಡಿಯುವ ನೀರು ಪೂರೈಸಲು ಜಲಧಾರೆ ಕಾರ್ಯಕ್ರಮದಡಿ ಸಾವಿರ ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಇಲ್ಲಿಯ ಯುವಕರಿಗೆ ಉದ್ಯೋಗ ಕಲ್ಪಿಸಲು ಹಲವು ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಪ್ರಕಟಿಸಿದರು.

ಇಡೀ ದಿನ ಸಿಎಂ ಮಾಡಿದ್ದೇನು?
– ಬೆಳಗ್ಗೆ 4:45ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಯಾದಗಿರಿ ರೈಲು ನಿಲ್ದಾಣಕ್ಕೆ ಆಗಮನ.

– 5 ಗಂಟೆಗೆ ಸರ್ಕ್ನೂಟ್‌ ಹೌಸ್‌ಗೆ ತೆರಳಿ ವಿಶ್ರಾಂತಿ.

– 8:30ರಿಂದ 9:20ರವರೆಗೆ ಕಾರ್ಯಕರ್ತರಿಂದ ಸನ್ಮಾನ ಸ್ವೀಕಾರ.

– 9:30ಕ್ಕೆ ಪೊಲೀಸ್‌ ಗೌರವ ವಂದನೆ ಸ್ವೀಕರಿಸಿ, ಗುರುಮಿಠಕಲ್‌ ಶಾಸಕರ ಮನೆಗೆ ತೆರಳಿ ಉಪಾಹಾರ ಸೇವನೆ.

– 10:30ಕ್ಕೆ ಶಾಸಕ ನಾಗನಗೌಡ ಕಂದಕೂರ ಅವರ ಯಾದಗಿರಿ ಮನೆಯಿಂದ ನಿರ್ಗಮಿಸಿ ಈಶಾನ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣ.

– 11:30ರ ವೇಳೆಗೆ ಗುರುಮಿಠಕಲ್‌ ಪಟ್ಟಣಕ್ಕೆ ಆಗಮನ.

– 12 ಗಂಟೆಗೆ ಚಂಡರಕಿ ಗ್ರಾಮಕ್ಕೆ ತಲುಪಿದ ಬಸ್‌. ಭವ್ಯವಾದ ಸ್ವಾಗತ ಸ್ವೀಕಾರ.

– 12:45ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಆಗಮನ. ಮಧ್ಯಾಹ್ನ 1:05ಕ್ಕೆ ಜ್ಯೋತಿ ಬೆಳಗಿಸಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ.

Advertisement

Udayavani is now on Telegram. Click here to join our channel and stay updated with the latest news.

Next