ಬೆಳಗಾವಿ: ಮಹಾರಾಷ್ಟ್ರದ ಸಚಿವದ್ವಯರಿಗೆ ಬೆಳಗಾವಿ ಪ್ರವೇಶಕ್ಕೆ ಬ್ರೇಕ್ ಬಿದ್ದು, ವಿವಾದ ತಣ್ಣಗಾಗುವಷ್ಟರಲ್ಲಿಯೇ ಈಗ ಏನ್ ಸಿ ಪಿ ಮುಖಂಡ ಶರದ್ ಪವಾರ ಅವರ ಮೊಮ್ಮಗ, ಜೇಮಖೇಡ್ ನ ಶಾಸಕ ರೋಹಿತ್ ಪವಾರ ಬೆಳಗಾವಿಗೆ ದಿಢೀರ್ ಭೇಟಿ ನೀಡಿ ಗಡಿಭಾಗದ ಮರಾಠಿ ಭಾಷಿಕರ ಸಮಸ್ಯೆ ಆಲಿಸುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ.
ಶರದ್ ಪವಾರ್ ಅವರ ಸೂಚನೆ ಮೇರೆಗೆ ಬೆಳಗಾವಿಗೆ ದಿಢೀರ್ ಭೇಟಿ ನೀಡಿದ ಶಾಸಕ ರೋಹಿತ್ ಪವಾರ್ ಅವರು ಬೆಳಗಾವಿಯ ಮರಾಠಿ ಭಾಷಿಕರ ಸಮಸ್ಯೆ ಆಲಿಸಿದರು. ಬೆಳಗಾವಿ ನಗರ ಸೇರಿದಂತೆ ಯಳ್ಳೂರು ಹೀಗೆ ವಿವಿಧ ಕಡೆಗೆ ಭೇಟಿ ನೀಡಿ ಮರಾಠಿ ಭಾಷಿಕರ ಸಮಸ್ಯೆ ಆಲಿಸಿದರು.
ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಗಡಿ ವಿವಾದ ಯಾವ ಹಂತದಲ್ಲಿದೆ, ನಮ್ಮ ಪರವಾಗಿ ತೀರ್ಪು ಬರುವಂತೆ ವಕೀಲರು ನಡೆಸುತ್ತಿರುವ ವಕಾಲತ್ತಿನ ಬಗ್ಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಮರಾಠಿ ಭಾಷಿಕರ ಮೇಲೆ ಆಗುತ್ತಿರುವ ಅನ್ಯಾಯ ನಿಲ್ಲಬೇಕಿದೆ, ಅನೇಕ ವರ್ಷಗಳಿಂದ ನೀವು ನಡೆಸುತ್ತಿರುವ ಹೋರಾಟ ನಮಗೆ ಪ್ರೇರಣೆಯಾಗಿದೆ ಎಂದು ರೋಹಿತ್ ಪವಾರ್ ಹೇಳಿದರು.
ಶಾಸಕ ರೋಹಿತ್ ಪವಾರ ಬೆಳಗಾವಿಗೆ ಬರುತ್ತಿದ್ದಂತೆ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನಕ್ಕೆ ತೆರಳಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಇವರೊಂದಿಗೆ ಶ್ರೀರಾಮ ಸೇನೆ ಹಿಂದುಸ್ಥಾನ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಸೇರಿದಂತೆ ಇತರರು ಇದ್ದರು.
ನಂತರ ಮರಾಠಿ ಭಾಷಿಕರ ಬಾಹುಳ್ಯ ಇರುವ ಯಳ್ಳೂರು ಗ್ರಾಮಕ್ಕೆ ಶಾಸಕ ರೋಹಿತ ಪವಾರ ಭೇಟಿ ನೀಡಿದರು. ಈ ವೇಳೆ ಎಂಎಸ್ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ದೀಪಕ್ ದಳವಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಕೆಲವೊಂದು ಬೆಳಗಾವಿ ಗಡಿ ವಿವಾದ ಬಗ್ಗೆ ಚರ್ಚಿಸಿದರು.