ಮುಂಬಯಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಜೈಲಿನಲ್ಲಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ರಾಜ್ಯದಿಂದ ಆರು ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನದ ಜಾಮೀನು ಕೋರಿ ಸೋಮವಾರ ಇಲ್ಲಿನ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಕಳೆದ ವಾರ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲು ಸೇರಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕೂಡ ಇದೇ ರೀತಿಯ ಅರ್ಜಿ ಸಲ್ಲಿಸಿದ್ದರು.
ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರ ಅರ್ಜಿಗಳಿಗೆ ಉತ್ತರಗಳನ್ನು ಸಲ್ಲಿಸಲು ಇಡಿ ಸಮಯ ಕೋರಿದ್ದು, ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡುವಂತೆ ಇಬ್ಬರೂ ಅನುಮತಿ ಕೋರಿದ್ದಾರೆ. ಇಡಿ ನಾಳೆಯೊಳಗೆ ಉತ್ತರವನ್ನು ಸಲ್ಲಿಸಬೇಕಾಗಿದ್ದು, ಮುಂದಿನ ವಿಚಾರಣೆ ಜೂನ್ 8 ಕ್ಕೆ ನಡೆಯಲಿದೆ. ಜೂನ್ 10 ರಂದು ರಾಜ್ಯಸಭಾ ಚುನಾವಣೆ ನಿಗದಿಯಾಗಿದೆ.
ಏನನ್ನೂ ಮಾಡದ ನಮ್ಮ ಇಬ್ಬರು ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಜೈಲಿನಲ್ಲಿ ಸಿಲುಕಿದ್ದಾರೆ. ದೇಶಮುಖ್ ಕುಟುಂಬದ ಮೇಲೆ 109 ಬಾರಿ ದಾಳಿ ಮಾಡಿದ್ದು, ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಸಬೇಕು.ಇಂದು ಅಥವಾ ನಾಳೆ ನ್ಯಾಯಾಲಯ ಅವರಿಗೆ ಕ್ಲೀನ್ ಚಿಟ್ ನೀಡುತ್ತದೆ. ಕೇಂದ್ರದ ವಿರುದ್ಧ ಮಾತನಾಡುವವರ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕಿಡಿ ಕಾರಿದ್ದಾರೆ.