Advertisement

ಗಡಿ ಜನರಿಗೆ ಮಹಾರಾಷ್ಟ್ರ “ಆರೋಗ್ಯ ಭಾಗ್ಯ’ವಿವಾದ

12:21 AM Mar 16, 2023 | Team Udayavani |

ಬೆಳಗಾವಿ/ಬೆಂಗಳೂರು: ಮಹಾರಾಷ್ಟ್ರ ವಿಚಾರದಲ್ಲಿ ತನ್ನ ಮೊಂಡುತನ ಪ್ರದರ್ಶಿಸುತ್ತ ಬಂದಿರುವ ಮಹಾರಾಷ್ಟ್ರ ಈಗ ಕರ್ನಾಟಕದ 865 ಹಳ್ಳಿ ಮತ್ತು ಪಟ್ಟಣಗಳಲ್ಲಿ ಮಹಾತ್ಮಾ ಜ್ಯೋತಿ ಬಾ ಫ‌ುಲೆ ಜನ ಆರೋಗ್ಯ ಯೋಜನೆ ಜಾರಿಗೆ ತರುವುದಾಗಿ ಹೇಳುವ ಮೂಲಕ ಗಡಿ ಕಿಚ್ಚು ಹಚ್ಚಿದೆ. ಮಹಾ ಸರಕಾರದ ಈ ಕ್ರಮದ ವಿರುದ್ಧ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಗಮನಾರ್ಹವೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದ ಕುರಿತಂತೆ ವಿಚಾರಣೆ ಹಂತದಲ್ಲಿರುವಂತೆಯೇ ರಾಜ್ಯದ ಐದು ಜಿಲ್ಲೆಗಳ 865 ಹಳ್ಳಿಗಳಲ್ಲಿಯ ಮರಾಠಿಗರು ಮತ್ತು ಮರಾಠಿಯೇತರರಿಗೆ 54 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆ ಜಾರಿಗೆ ಮುಂದಾಗಿದೆ.

ಮಹಾರಾಷ್ಟ್ರ ಸರಕಾರದ ದುಸ್ಸಾಹಸದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಮಾತನಾಡಿ, “ಮಹಾರಾಷ್ಟ್ರ ಸರಕಾರ 54 ಕೋಟಿ ರೂ. ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ಪಡೆದು ಅದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನೆರೆಯ ರಾಜ್ಯದ ಕುತ್ಸಿತ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ಸಿಎಂಗೆ ಪತ್ರ ಬರೆದು ಕಳವಳ
ಇನ್ನೊಂದೆಡೆ ಕರುನಾಡಿನ ಗ್ರಾಮಸ್ಥರಿಗೆ ವಿಮಾ ಯೋಜನೆ ಜಾರಿಗೆ ಮುಂದಾಗಿರುವ ಮಹಾರಾಷ್ಟ್ರ ಸರಕಾರದ ಕ್ರಮ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮಹಾರಾಷ್ಟ್ರ ಸರಕಾರದ ಈ ನಿರ್ಧಾರವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂತ್ರದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನೆನಪಿಸಿದ್ದಾರೆ.

Advertisement

ಕಾಂಗ್ರೆಸ್‌ ತೀವ್ರ ಆಕ್ರೋಶ
ಕರ್ನಾಟಕದ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಆರೋಗ್ಯ ಯೋಜನೆ ವಿಚಾರ ಸಂಬಂಧ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯದ ಹಿತ ಕಾಪಾಡುವಲ್ಲಿ ವಿಫ‌ಲರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಮಹಾರಾಷ್ಟ್ರದ ಏಕನಾಥ್‌ ಶಿಂಧೆ ಸರಕಾರವನ್ನು ಕೇಂದ್ರ ಸರಕಾರ ಕೂಡಲೇ ವಜಾ ಮಾಡಬೇಕು, ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ಸುಮ್ಮನಿದೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಕೂಡ ಮಾತನಾಡುತ್ತಿಲ್ಲ, ಇಲ್ಲಿ ಸರಕಾರ ಸತ್ತು ಹೋಗಿದೆಯಾ ಎಂಬ ಅನುಮಾನ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ರಾಜೀನಾಮೆ ನೀಡಲಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ರಾಜ್ಯ ಸರಕಾರದ ವೈಫ‌ಲ್ಯವಿದೆ. ಹೀಗಾಗಿ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅವರ ಯೋಜನೆ ನಮ್ಮ ನೆಲದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜೀನಾಮೆ ಏಕೆ?
ಮಹಾರಾಷ್ಟ್ರದ ಹಸ್ತಕ್ಷೇಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ ಮಹಾರಾಷ್ಟ್ರದಲ್ಲಿರುವ ಪಂಢರಪುರ ಹಾಗೂ ತುಳಜಾಪುರಕ್ಕೆ ಕರ್ನಾಟಕದಿಂದ ಬಹಳಷ್ಟು ಜನರು ಹೋಗುತ್ತಾರೆ. ಅಲ್ಲಿ ನಾವೂ ಅನುದಾನ ನೀಡುತ್ತೇವೆ. ಮಹಾರಾಷ್ಟ್ರ ಸರಕಾರ ಅನುದಾನ ಬಿಡುಗಡೆ ಮಾಡಿದರೆ ನಾನೇಕೆ ರಾಜೀನಾಮೆ ನೀಡಬೇಕು. ಡಿ.ಕೆ. ಶಿವಕುಮಾರ್‌ ಅವರಿಂದ ನಾನು ಪಾಠ ಕಲಿಯಬೇಕಾದ ಅಗತ್ಯ ಇಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next