Advertisement

High Court ಚೌಟರ ಅರಮನೆ ಸಮೀಪ ಮಾರುಕಟ್ಟೆ ವಿವಾದ: ಜು. 24ಕ್ಕೆ ಆದೇಶ

01:22 AM Jul 12, 2024 | Team Udayavani |

ಬೆಂಗಳೂರು: ಸಂರಕ್ಷಿತ ಸ್ಮಾರಕ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಪ್ರಾಚೀನ ಚೌಟರ ಅರಮನೆ ಸಮೀಪ ಹಳೆ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಿ ಬಹುಮಹಡಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಜು. 24ರಂದು ಆದೇಶಗಳನ್ನು ಹೊರಡಿಸುವುದಾಗಿ ಹೈಕೋರ್ಟ್‌ ಹೇಳಿದೆ.

Advertisement

ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಮೂಡುಬಿದಿರೆ ಪುರಸಭೆಯ ಕ್ರಮ ಪ್ರಶ್ನಿಸಿ ಜೇಸನ್‌ ಮಾರ್ಷಲ್‌ ನವಾರೇಸ್‌ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (ಎನ್‌ಎಂಎ) ಕ್ರಮ ಪ್ರಶ್ನಿಸಿ ಮೂಡುಬಿದಿರೆ ಪುರಸಭೆ ಸಲ್ಲಿಸಿರುವ ಅರ್ಜಿಗಳು ಮುಖ್ಯ ನ್ಯಾ| ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿದ್ದವು.

ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಕಾನೂನಿನಲ್ಲಿ ಇದ್ದರೂ ಪುರಾತನ ಚೌಟರ ಅರಮನೆಯ 190 ಮೀ. ವ್ಯಾಪ್ತಿಯಲ್ಲಿರುವ ಹಳೆಯ ಮಾರುಕಟ್ಟೆ ಕಟ್ಟಡವನ್ನು ನೆಲಸಮ ಮಾಡಿ ಸ್ಥಳೀಯ ಪುರಸಭೆ ಬಹುಮಹಡಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿದೆ. ನೂರಾರು ಕೋಟಿ ಬೆಲೆ ಬಾಳುವ ಸಾರ್ವಜನಿಕ ಆಸ್ತಿಯನ್ನು ಪುರಸಭೆ ತನ್ನಿಚ್ಛೆಯಂತೆ ಬಳಸಿಕೊಳ್ಳುತ್ತಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಆರೋಪಿಸಿದರು.
ಸಂರಕ್ಷಿತ ಸ್ಮಾರಕ ಪ್ರದೇಶದ 100 ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ. ಆದರೆ ಮಾರುಕಟ್ಟೆ ಸ್ಥಳವು ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಮೇಲಾಗಿ ಕಟ್ಟಡ ನಿರ್ಮಾಣದಿಂದ ಸಂರಕ್ಷಿತ ಸ್ಮಾರಕಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಕೇಂದ್ರ ಸರಕಾರ ಸ್ವಾಮ್ಯದ ಇಂಡಿಯನ್‌ ನ್ಯಾಶನಲ್‌ ಟ್ರಸ್ಟ್‌ ಫಾರ್‌ ಆರ್ಟ್‌ ಆ್ಯಂಡ್‌ ಕಲ್ಚರಲ್‌ ಹೆರಿಟೇಜ್‌’ ವರದಿ ನೀಡಿದೆ.

ಈ ವರದಿ ಪರಿಶೀಲಿಸಿ ಎಂದು ನ್ಯಾಯಾಲಯದ ಆದೇಶವವಿದ್ದರೂ ಭಾರತೀಯ ಪುರಾ ತತ್ವ ಸರ್ವೇಕ್ಷಣಾಲಯ ಅದನ್ನು ಪರಿಗಣಿಸಿಲ್ಲ ಎಂದು ಮೂಡಬಿದಿರೆ ಪುರಸಭೆ ಪರ ವಕೀಲರು ವಾದಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಅನುಮತಿ ಇಲ್ಲದೆ ಗುತ್ತಿಗೆದಾರರು ನಿರ್ಮಾಣ ಕಾಮಗಾರಿ ಆರಂಭಿಸಿದ್ದಾದರೂ ಹೇಗೆ, ನ್ಯಾಯಾಲಯ ಆದೇಶ ನೀಡಿದ್ದರೂ ಸುಮ್ಮನೆ ಇದ್ದಿದ್ದೇಕೆ, ನೀವೇನು ನ್ಯಾಯಾಲಯಕ್ಕೂ ಮೀರಿದವರಾ? ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಪರ ವಕೀಲರನ್ನು ಮತ್ತು ಗುತ್ತಿಗೆದಾರರ ಪರ ವಕೀಲರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next