Advertisement

Supreme Court ಸರಿ ಉತ್ತರ ಗುರುತಿಸಲು ದಿಲ್ಲಿ ಐಐಟಿ ಸಮಿತಿ

10:06 PM Jul 22, 2024 | Team Udayavani |

ನವದೆಹಲಿ: ನೀಟ್‌-ಯುಜಿ 2024ರ ಭೌತಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಸಂಬಂಧಿಸಿದಂತೆ ಈಗ ಗೊಂದಲ ಶುರುವಾಗಿದ್ದು, ಸರಿಯಾದ ಉತ್ತರ ಗುರುತಿಸಲು ಮೂವರ ತಜ್ಞರ ಸಮಿತಿ ರಚಿಸಿ, ಮಂಗಳವಾರ ಮಧ್ಯಾಹ್ನ 12 ಗಂಟೆಯೊಳಗೇ ವರದಿ ನೀಡುವಂತೆ ದಿಲ್ಲಿ ಐಐಟಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

Advertisement

ನೀಟ್‌ ಅಕ್ರಮ ಕುರಿತ ಅರ್ಜಿಗಳ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ. ನೀಟ್‌-ಯುಜಿ ಪರೀಕ್ಷೆಯಲ್ಲಿ ಪರಮಾಣು ಮತ್ತು ಅದರ ಗುಣಲಕ್ಷಣಗಳ ಕುರಿತಾದ ಪ್ರಶ್ನೆಗೆ 4 ಆಯ್ಕೆಗಳನ್ನು ನೀಡಲಾಗಿತ್ತು. ಅದರಲ್ಲಿ 2 ಸರಿಯಾದ ಉತ್ತರಗಳಿದ್ದವು. ಕೆಲವು ಅಭ್ಯರ್ಥಿಗಳು 2ರ ಪೈಕಿ ಒಂದು ಉತ್ತರ ನೀಡಿದ್ದು, ಅಂಥವರಿಗೆ 4 ಅಂಕಗಳನ್ನು ನೀಡಲಾಗಿದೆ. ಅಂಕ ಕಳೆದುಕೊಳ್ಳಬಾರದು (ನೆಗೆಟಿವ್‌ ಅಂಕ) ಎಂಬ ಕಾರಣಕ್ಕೆ ನಾನು ಆ ಪ್ರಶ್ನೆಗೆ ಉತ್ತರ ನೀಡಲು ಹೋಗಿಲ್ಲ. ಪರೀಕ್ಷಾ ಸಂಸ್ಥೆಯ ಎಡವಟ್ಟಿನಿಂದಾಗಿ ನನಗೆ ಅಂಕಗಳು ನಷ್ಟವಾಗಿವೆ ಎಂದು 711 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಯೊಬ್ಬರು ದೂರಿದ್ದಾರೆ.

ವಿಚಾರಣೆ ನಡೆಸಿದ ಸಿಜೆಐ ಡಿ.ವೈ. ಚಂದ್ರಚೂಡ್‌ ಅವರು, “ಎನ್‌ಸಿಇಆರ್‌ಟಿ ಪರಿಷ್ಕೃತ ಆವೃತ್ತಿಯ ಪ್ರಕಾರ, ಆಯ್ಕೆ 4 ಸರಿಯಾದ ಉತ್ತರವಾಗಿದೆ. ಹೀಗಿದ್ದಾಗ ಆಯ್ಕೆ 2 ಎಂದು ಉತ್ತರಿಸಿದವರಿಗೆ ಅಂಕ ಕೊಡಬಾರದು. ಆದರೆ ನೀವು ಎರಡಕ್ಕೂ ಅಂಕ ಕೊಟ್ಟಿದ್ದೀರಿ. ಯಾವುದಾದರೂ ಒಂದನ್ನಷ್ಟೇ ಉತ್ತರ ಎಂದು ಪರಿಗಣಿಸಬೇಕೇ ಹೊರತು ಎರಡನ್ನೂ ಪರಿಗಣಿಸುವುದು ಸರಿಯಲ್ಲ ಎಂದರು. ಅಲ್ಲದೆ, ಇದು ಅಂತಿಮ ಮೆರಿಟ್‌ ಲಿಸ್ಟ್‌ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಅರ್ಜಿದಾರರ ವಾದವನ್ನು ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡಿದೆ.

ಈ ಮಧ್ಯೆ, ಕೋರ್ಟ್‌ ನೀಟ್‌ ಯುಜಿ ಪರೀಕ್ಷೆ ಪತ್ರಿಕೆ ಸೋರಿಕೆಯು ವ್ಯವಸ್ಥಿತವಾಗಿ, ದೇಶಾದ್ಯಂತ ನಡೆದಿದೆ ಎಂಬುದನ್ನು ಸಾಬೀತುಪಡಿಸುವಂತೆ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next