ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಮತ್ತೆ ಕೆಣಕಿರುವ ಮಹಾರಾಷ್ಟ್ರ ಸರಕಾರ ಗಡಿ ಪ್ರದೇಶದಲ್ಲಿ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಸಾಹಸಕ್ಕೆ ಪುನಃ ಕೈಹಾಕಿದೆ. ಮೇ 1ರಂದು “ಮಹಾರಾಷ್ಟ್ರ ದಿನಾಚರಣೆ’ ನೆಪ ಮಾಡಿಕೊಂಡು ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ವಿವಾದ ಕೆದಕಿದ್ದಾರೆ. ಎರಡೂ ರಾಜ್ಯಗಳ ಅಭಿವೃದ್ಧಿ ದೃಷ್ಟಿ ಯಿಂದ ಇದು ಅಪಾಯಕಾರಿ ಬೆಳವಣಿಗೆ.
ಅಜಿತ್ ಪವಾರ್ ಅವರು ಕರ್ನಾಟಕದ ಮರಾಠಿ ಭಾಷಿಕ ಪ್ರದೇಶ ಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರಕಾರದಿಂದ ಬೆಂಬಲ ನೀಡಲಾಗುವುದು ಎಂದು ಹೇಳಿ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇಲ್ಲಿ ಪವಾರ್ ಯಾರನ್ನೋ ಸಮಾ ಧಾನಿಸಲು ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದಾರೆ.
ಗಡಿ ವಿವಾದ ಕೆಣಕುವುದೇ ಮಹಾರಾಷ್ಟ್ರದ ಮೊದಲ ಕೆಲಸ. ಇದು ಕಳೆದ 62 ವರ್ಷಗಳಿಂದ ನಡೆದುಕೊಂಡು ಬಂದಿದೆ. ಅವರಿಂದ ಬೇರೆ ಯದನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಮಹಾರಾಷ್ಟ್ರ ವಿವಾದ ಕೆಣಕಿದಾಗ ಬೆಳಗಾವಿ ಸೇರಿದಂತೆ ಗಡಿ ಭಾಗದ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಿದ್ಧ ಉತ್ತರವನ್ನು ನೀಡಿ ಸುಮ್ಮನೆ ಕುಳಿತು ಕೊಳ್ಳುವ ಕರ್ನಾಟಕ ಸರಕಾರ ಅದಕ್ಕೆ ಪೂರಕವಾಗಿ ಯಾವ ಕಾನೂನು ಕ್ರಮ ಕೈಗೊಂಡಿದೆ ಎಂಬುದು ಕನ್ನಡಿಗರ ಪ್ರಶ್ನೆ.
ಗಡಿ ವಿವಾದ ಕುರಿತು ಮೇಲಿಂದ ಮೇಲೆ ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಿದರೆ ಅದರಿಂದ ಪರಿಹಾರ ಸಿಗುವುದಿಲ್ಲ. ಇದು ಮಹಾರಾಷ್ಟ್ರದ ನಾಯಕರು ಹಾಗೂ ಕರ್ನಾಟಕದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರ ಪರ ಇರುವ ನಾಯಕರಿಗೂ ಗೊತ್ತಿದೆ. ಆದರೂ ಆಗಾಗ ಈ ವಿಷಯವನ್ನು ಕೆದಕುವುದನ್ನು ಬಿಟ್ಟಿಲ್ಲ. ಎಂದೋ ಮುಗಿದು ಹೋದ ವಿಷಯಕ್ಕೆ ಮೇಲಿಂದ ಮೇಲೆ ರಾಜಕೀಯ ಬಣ್ಣ ಕೊಟ್ಟು ಅದರಿಂದ ಲಾಭ ಪಡೆದು ಕೊಳ್ಳುವ ಕಾರ್ಯಕ್ಕೆ ಮಹಾರಾಷ್ಟ್ರದ ನಾಯಕರು ಇಳಿದಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಸಮೀಪ ಇದ್ದಾಗ ಇಲ್ಲವೇ ಮಹಾ ರಾಷ್ಟ್ರದಲ್ಲಿ ತಮ್ಮ ಜನಪ್ರಿಯತೆ ಕಡಿಮೆಯಾದಾಗ ಅಲ್ಲಿನ ನಾಯಕರು ಮುಗಿಬೀಳುವುದು ಸಾಮಾನ್ಯವೆನಿಸಿದೆ. ಇದಕ್ಕೆ ಕರ್ನಾಟಕ ಸರಕಾರದ ಉದಾಸೀನ ಮನೋಭಾವವೂ ಪ್ರಮುಖ ಕಾರಣ.
ಹಾಗೆ ನೋಡಿದರೆ ಗಡಿ ಭಾಗದ ಪ್ರದೇಶಗಳ ಜನರಲ್ಲಿ ಕರ್ನಾಟಕ ಸರಕಾರ ನಿಮ್ಮ ಜತೆಗಿದೆ ಎಂಬ ಆತ್ಮವಿಶ್ವಾಸ ಮೂಡಿಸಲು ಹಾಗೂ ಅಲ್ಲಿನ ಕನ್ನಡಿಗರ ಹಿತ ಕಾಯುವ ಉದ್ದೇಶದಿಂದ ಸರಕಾರ ರಚಿಸಿರುವ ಆಯೋಗ ಹಾಗೂ ಸಮಿತಿಗಳ ಚಟುವಟಿಕೆ ಟೀಕೆಗೆ ಗುರಿಯಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರ ನಿಷ್ಕ್ರಿಯವಾಗಿದೆ. ಗಡಿ ಸಂರಕ್ಷಣ ಆಯೋಗ ಇದ್ದೂ ಇಲ್ಲದಂತಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ ನಿಸ್ತೇಜವಾಗಿದೆ. ಈ ರೀತಿಯ ವ್ಯವಸ್ಥೆ ಇರುವಾಗ ಮಹಾರಾಷ್ಟ್ರದ ವಿರುದ್ಧ ನಾವು ಟೀಕೆ ಮಾಡಿದರೂ ಅರ್ಥವಿಲ್ಲ ಎಂಬ ಬಲವಾದ ಆರೋಪ ಇದೆ. ಮೇಲಾಗಿ ಗಡಿ ಸಂರಕ್ಷಣ ಆಯೋಗವನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು. ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು ಎಂಬ ಮನವಿಗಳು ಅರಣ್ಯರೋದನವಾಗಿವೆ. ಸರಕಾರ ಮೊದಲು ಈ ಗೊಂದಲವನ್ನು ಬಗೆಹರಿಸುವ ಕೆಲಸ ಮಾಡಬೇಕು. ಅನಂತರ ವಿವಾದ ಕೆಣಕುವ ನಾಯಕರಿಗೆ ಕಾನೂನಿನ ಮೂಲಕವೇ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಈ ರೀತಿಯ ಹೇಳಿಕೆ ನಿಲ್ಲುವುದಿಲ್ಲ. ಗಡಿ ಭಾಗದ ಕನ್ನಡಿಗರಿಗೆ ಆತಂಕ ತಪ್ಪುವುದಿಲ್ಲ.