ಮುಂಬಯಿ: ನಾಟಕೀಯ ತಿರುವುಗಳನ್ನು ಕಂಡು, ಮಹಾರಾಷ್ಟ್ರ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಉದ್ಧವ್ ಠಾಕ್ರೆಗೆ ಈಗ ಕೋವಿಡ್ 19 ವೈರಸ್ ಪಾಶ ಕಟ್ಟಿಹಾಕಿದೆ. ಅತ್ತ ವಿಧಾನಸಭೆ, ಇತ್ತ ವಿಧಾನ ಪರಿಷತ್ತನ್ನೂ ಪ್ರತಿನಿಧಿಸದ ಠಾಕ್ರೆ, 6 ತಿಂಗಳ ಗಡುವಿನ ಅಂಚಿನಲ್ಲಿದ್ದು, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಿದೆ.
ಉದ್ಧವ್ ಠಾಕ್ರೆ ಸಿಎಂ ಆಗಿ ಮೇ 28ಕ್ಕೆ 6 ತಿಂಗಳು ಪೂರ್ಣಗೊಳ್ಳುತ್ತದೆ. ಮಹಾರಾಷ್ಟ್ರದ ಎರಡೂ ವಿಧಾನಸಭೆಗಳಲ್ಲಿ ಸದಸ್ಯರಾಗದೆ, ಎನ್‌ಸಿಪಿ- ಕಾಂಗ್ರೆಸ್ ಪಕ್ಷಗಳ ಬೆಂಬಲದೊಂದಿಗೆ ಸಿಎಂ ಪದವಿ ಸ್ವೀಕರಿಸಿದ್ದರು.
164ನೇ ವಿಧಿಯಂತೆ ಅವರಿಗೆ ಶಾಸಕ ಸ್ಥಾನ ಹೊಂದಲು 6 ತಿಂಗಳ ಅವಕಾಶವಿತ್ತು. ಆದರೆ, ನಿರ್ಣಾಯಕ ಘಟ್ಟದಲ್ಲೇ ಕೋವಿಡ್ 19 ವೈರಸ್, ಮಹಾರಾಷ್ಟ್ರದಲ್ಲಿ ಅಟ್ಟಹಾಸ ಮೆರೆದಿದೆ. ಇಂಥ ಸಂದಿಗ್ಧತೆಯಲ್ಲಿ ಚುನಾವಣೆ ದೂರದ ಮಾತು.
ದಾರಿಗಳೇ ಇಲ್ಲ: ಕೋವಿಡ್ 19 ವೈರಸ್ ಪೂರ್ವದಲ್ಲಿಯೇ ಠಾಕ್ರೆ, ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಗೆಲ್ಲಬೇಕಿತ್ತು. ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಸ್ತುತ 2 ಶಾಸಕ ಹುದ್ದೆಗಳು ಖಾಲಿ ಇವೆ. ರಾಜ್ಯಪಾಲರು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಆಂದೋಲನ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಅಲ್ಲಿಗೆ ಆರಿಸುತ್ತಾರೆ. ಈ ಯಾವ ಕ್ಷೇತ್ರಗಳಿಗೂ ಉದ್ಧವ್ ಹೊಂದುವುದೇ ಇಲ್ಲ.
ಮರು ಆಯ್ಕೆ?: ಉದ್ಧವ್ ಮೇ 28ಕ್ಕೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ, ಪುನಃ ಅಧಿಕಾರ ಹಿಡಿಯಬಹುದೇ ಎಂಬ ಜಿಜ್ಞಾಸೆಯೂ ಇದೆ. ಆದರೆ ಇದು ಸಾಧ್ಯವಾಗದ ಮಾತು. ಹಿಂದೆ 1995ರಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್‌ನಿಂದ ಮಂತ್ರಿ ಆಗಿದ್ದ ತೇಜ್ ಪ್ರಕಾಶ್ ಸಿಂಗ್ ಹೀಗೆಯೇ ಮಾಡಿದ್ದರು. ಆದರೆ, ಇಬ್ಬರು ಸಿಎಂಗಳ ಕಾಲಾವಧಿಗೆ ಆ ಬೆಳವಣಿಗೆ ಸಾಕ್ಷಿಯಾಗಿತ್ತು.
ನಂತರ, 2001ರಲ್ಲಿ ಸುಪ್ರಿಂ ಕೋರ್ಟ್ ರಾಜೀನಾಮೆ, ಮರು ಆಯ್ಕೆಯ ಈ ಪ್ರಕ್ರಿಯೆಯನ್ನು ಸಂವಿಧಾನ ವಿರೋಧಿ ಎಂದು ಘೋಷಿಸಿತ್ತು. ಹೀಗಾಗಿ, ಉದ್ಧವ್‌ಗೆ ಈಗ ಆ ಮಾರ್ಗವೂ ಉಳಿದಿಲ್ಲ. ಉದ್ಧವ್ ಸಿಎಂ ಸ್ಥಾನಕ್ಕೆ ಕೋವಿಡ್ 19 ವೈರಸ್ ಕುತ್ತು ತರುವ ಸಾಧ್ಯತೆಯೇ ದಟ್ಟವಾಗಿದೆ.