ನವದೆಹಲಿ: ಅಸ್ಸಾಂ ಮತ್ತು ಮಹಾರಾಷ್ಟ್ರದ ನಡುವೆ ಈಗ “ಜ್ಯೋತಿರ್ಲಿಂಗ ಜಗಳ’ ಆರಂಭವಾಗಿವೆ.
ಮಹಾರಾಷ್ಟ್ರದ ಎನ್‌ಸಿಪಿ, ಕಾಂಗ್ರೆಸ್ ಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿವೆ. ಇದಕ್ಕೆಲ್ಲ ಕಾರಣ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ, “ದೇಶದ 6ನೇ ಜ್ಯೋತಿರ್ಲಿಂಗ ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿದೆ’ ಎಂದು ಜಾಹೀರಾತು ನೀಡಿದ್ದು. ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಮಹಾರಾಷ್ಟ್ರದಿಂದ ಕೈಗಾರಿಕೆಗಳನ್ನು, ಉದ್ಯೋಗವನ್ನು ಕಿತ್ತುಕೊಂಡಿದೆ. ಈಗ ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೂ ಕದಿಯಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಅಸ್ಸಾಂನ ಕಾಮರೂಪ ಜಿಲ್ಲೆಯ ಪಮೋಹಿಯಲ್ಲಿರುವ ಭೀಮಾಶಂಕರ ದೇವಸ್ಥಾನ 12 ಜ್ಯೋತಿರ್ಲಿಂಗಗಳ ಪೈಕಿ 6ನೆಯದ್ದು. ಇಲ್ಲಿ ಫೆ.18ರಂದು ಶಿವರಾತ್ರಿ ಆಚರಣೆ ನಡೆಯಲಿದೆ.
ಎಲ್ಲರಿಗೂ ಸ್ವಾಗತ ಎಂದು ಹಿಮಂತ ಅವರು ಜಾಹೀರಾತು ನೀಡಿದ್ದಾರೆ. ಈ ವಿಚಾರ ಮಹಾರಾಷ್ಟ್ರದಲ್ಲಿನ ಪ್ರತಿಪಕ್ಷ ನಾಯಕರನ್ನು ರೊಚ್ಚಿಗೆಬ್ಬಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ ತಾಲೂಕಿನ ಭೋಜಗಿರಿಯಲ್ಲಿ ಭೀಮಾಶಂಕರ ದೇವಸ್ಥಾನವಿದೆ. ಇಲ್ಲೇ ಭೀಮಾ ನದಿ ಹುಟ್ಟಿ ಹರಿಯುವುದು. ಇದನ್ನು ಬಹಳ ಹಿಂದಿನಿಂದಲೂ 6ನೇ ಜ್ಯೋತಿರ್ಲಿಂಗವೆಂದು ಪೂಜಿಸಲಾಗುತ್ತದೆ. ಈ ಕುರಿತಂತೆ ಆದಿ ಶಂಕರಾಚಾರ್ಯ ವಿರಚಿತ ಬೃಹದ್ ರತ್ನಾಕರ ಸ್ತೋತ್ರವನ್ನು ಉಲ್ಲೇಖಿಸಿರುವ ಸುಪ್ರಿಯಾ ಸುಳೆ, ಭೀಮಾಶಂಕರ ದೇವಸ್ಥಾನ ಭೀಮಾ ನದಿಯ ಉಗಮಸ್ಥಾನ, ಡಾಕಿನಿ ಕಾಡಿರುವ ಜಾಗ ಎಂದು ಹೇಳಲಾಗಿದೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು ಎಂದು ಪ್ರಶ್ನಿಸಿದ್ದಾರೆ.