ಮುಂಬೈ/ನವದೆಹಲಿ: ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ನೇತೃತ್ವದ ಮಹಾ ಅಘಾಡಿಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಶನಿವಾರ ಮಧ್ಯಾಹ್ನ ವಿಶ್ವಾಸ ಮತ ಯಾಚಿಸಲು ಸಿದ್ದವಾಗಿದೆ. ಏತನ್ಮಧ್ಯೆ ಪ್ರೋ ಟೆಮ್ (ಹಂಗಾಮಿ) ಸ್ಪೀಕರ್ ಅವರನ್ನು ಬದಲಾಯಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಉದ್ದವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಬಿಜೆಪಿಯ ಹಿರಿಯ ಮುಖಂಡ ಕಾಳಿದಾಸ್ ಕೋಲಂಬ್ಕರ್ ಅವರನ್ನು ಪ್ರೋ ಟೆಮ್ ಸ್ಪೀಕರ್ ಆಗಿ ನೇಮಕ ಮಾಡಿದ್ದರು.
ಮಹಾವಿಕಾಸ್ ಅಘಾಡಿ ಇದೀಗ ಕಾಳಿದಾಸ್ ಅವರ ಬದಲು ದಿಲಿಪ್ ವಾಲ್ಸೆ ಪಾಟೀಲ್ ಅವರನ್ನು ಪ್ರೋ ಟೆಮ್ ಸ್ಪೀಕರ್ ಆಗಿ ನೇಮಕ ಮಾಡಿದೆ. ದಿಲಿಪ್ ವಾಲ್ಸೆ ಆಯ್ಕೆ ಕಾನೂನು ಪ್ರಕಾರ ತಪ್ಪು. ನೂತನ ಸರ್ಕಾರ ಎಲ್ಲಾ ಕಾನೂನನ್ನು ಉಲ್ಲಂಘಿಸುತ್ತಿದೆ. ನಾವು ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಬಿಜೆಪಿ ತಿಳಿಸಿದೆ.
ಎನ್ ಸಿಪಿಯ ಹಿರಿಯ ಮುಖಂಡ ದಿಲೀಪ್ ವಾಲ್ಸೆ ಪಾಟೀಲ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ಪ್ರೋ ಟೆಮ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇಂದು ಮಧ್ಯಾಹ್ನ 2ಗಂಟೆಗೆ ಆರಂಭವಾಗಲಿರುವ ವಿಶೇಷ ಅಧಿವೇಶನವನ್ನು ಪಾಟೀಲ್ ಮುನ್ನಡೆಸಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದರು.
2 ದಿನಗಳ ಕಾಲ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಶನಿವಾರದಿಂದ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ವಿಶ್ವಾಸಮತ ಯಾಚನೆ ನಡೆಯಲಿದೆ. ಅಲ್ಲದೇ ವಿಧಾನಸಭಾ ಸ್ಪೀಕರ್ ಚುನಾವಣೆ ಕೂಡಾ ನಡೆಯಲಿದೆ.