ಮುಂಬೈ: ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ 40 ದಿನಗಳ ಕಾಲ ಕಳೆದ ನಂತರ ಕೊನೆಗೂ ಬಿಜೆಪಿ ಮತ್ತು ಶಿವಸೇನಾ ಸೇರಿದಂತೆ 18 ಮಂದಿ ಶಾಸಕರು ಮಂಗಳವಾರ (ಆಗಸ್ಟ್ 09) ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಚಿವ ಸಂಪುಟವನ್ನು ವಿಸ್ತರಿಸಿದಂತಾಗಿದೆ.
ಇದನ್ನೂ ಓದಿ:ಕ್ರೀಸಿಗೆ ಹೋಗುವ ಭರದಲ್ಲಿ ಬಿದ್ದ ಭಾಟಿಯಾ: ಬಿದ್ದುಬಿದ್ದು ನಕ್ಕ ಹರ್ಮನ್, ಮಂಧನಾ; ವಿಡಿಯೋ
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ 9 ಹಾಗೂ ಶಿಂಧೆ ನೇತೃತ್ವದ ಶಿವಸೇನಾದ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಚಿವ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ವಿರುದ್ಧ ಬಂಡಾಯ ಸಾರಿದ್ದ ಏಕನಾಥ ಶಿಂಧೆ 40 ಶಾಸಕರೊಂದಿಗೆ ಬಿಜೆಪಿ ಜತೆ ಕೈಜೋಡಿಸಿದ್ದರು. ಇದರ ಪರಿಣಾಮ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದು, ಬಳಿಕ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಏತನ್ಮಧ್ಯೆ ಸಿಎಂ ಆಗಿ 40 ದಿನ ಕಳೆದರೂ ಸಂಪುಟ ವಿಸ್ತರಣೆಯಾಗದಿರುವ ಬಗ್ಗೆ ವಿಪಕ್ಷಗಳು ಟೀಕಿಸಿದ್ದವು. ನಂತರ ಶಿಂಧೆ ಮತ್ತು ಬಿಜೆಪಿ ನಾಯಕರ ಜೊತೆ ಸರಣಿ ಮಾತುಕತೆ ನಡೆದು, ಕೊನೆಗೂ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿತ್ತು.