ಮುಂಬಯಿ:ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತರಿಗೆ ಕಾನೂನು ಬಾಹಿರವಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಮೂರ್ತಿಝಾಪುರ್ ನಗರದಲ್ಲಿ ನಡೆದಿದೆ.
ಇದನ್ನೂ ಓದಿ:ರಾಮಮಂದಿರ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ಧೂಳಿಪಟವಾಗಲಿದೆ: ಬಿ.ವೈ.ವಿಜಯೇಂದ್ರ
ಡಾ.ಪುರುಷೋತ್ತಮ ಚಾವಕೆ ತನ್ನ ಕ್ಲಿನಿಕ್ ನಲ್ಲಿ ಇಬ್ಬರು ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ಕೊಡುತ್ತಿರುವುದನ್ನು ಆರೋಗ್ಯ ಅಧಿಕಾರಿ ಡಾ.ಸುಧೀರ್ ಕರಾಳೆ ಪತ್ತೆಹಚ್ಚಿದ್ದ ನಂತರ ವೈದ್ಯರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚಾವಕೆ ಕ್ಲಿನಿಕ್ ಮೇಲೆ ರಾಜ್ಯ ಆರೋಗ್ಯ ಇಲಾಖೆ ದಾಳಿ ನಡೆಸಿತ್ತು. ಈ ತಂಡದಲ್ಲಿ ಅಕೋಲಾ ಜಿಲ್ಲಾ ಉಪ ಆರೋಗ್ಯಾಧಿಕಾರಿ ಡಾ.ರಾಜ್ ಕುಮಾರ್ ಚೌಹಾಣ್, ಹೆಚ್ಚುವರಿ ಆರೋಗ್ಯಾಧಿಕಾರಿ ಡಾ.ವಿಜಯ್ ವಿಜಯ್ ಸಿಂಗ್ ಜಾಧವ್, ರಾಜ್ಯ ಕೋವಿಡ್ ನೋಡಲ್ ಅಧಿಕಾರಿ ಡಾ.ಕರಾಳೆ ಮತ್ತು ಡಾ.ಸುಭಾಶ್ ಸಾಳೌಂಕೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿಯಲ್ಲಿ ಚಾವಕೆ ಕ್ಲಿನಿಕ್ ನಲ್ಲಿ ಕಾನೂನು ಬಾಹಿರವಾಗಿ ಇಬ್ಬರು ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದು ಪತ್ತೆಯಾಗಿತ್ತು. ಇಬ್ಬರು ರೋಗಿಗಳ ಫೈಲ್ಸ್ ಅನ್ನು ವೈದ್ಯರ ತಂಡ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಪಿ ವೈದ್ಯ ಚಾವಕೆಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಯಾವುದೇ ಅಧಿಕೃತ ಅನುಮತಿ ಇಲ್ಲ. ಅಲ್ಲದೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಪ್ರಾಥಮಿಕ ತರಬೇತಿಯೂ ಪಡೆದಿಲ್ಲವಾಗಿರುವುದಾಗಿ ಡಾ.ರಾಜ್ ಕುಮಾರ್ ಚೌಹಾಣ್ ತಿಳಿಸಿದ್ದಾರೆ.