Advertisement

ಅವಿಶ್ವಾಸ ಸನ್ನಿಹಿತ: ಶೀಘ್ರವೇ ಮಹಾಪತನ? ಜು. 11ಕ್ಕೂ ಮೊದಲೇ ಅಧಿವೇಶನ ಕರೆಯುವ ಸಾಧ್ಯತೆ

02:41 AM Jun 28, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಭಿನ್ನಮತೀಯ ಶಾಸಕರ ವಿರುದ್ಧ ಜು. 11ರ ವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಶಿವಸೇನೆಯ ಬಂಡಾಯ ಶಾಸಕರ ಬಣದಲ್ಲಿ ಚಟುವಟಿಕೆಗಳು ಗರಿಗೆದರಿವೆ.

Advertisement

ಏಕನಾಥ ಶಿಂಧೆ ಬಣದ ಇಬ್ಬರು ಶಾಸಕರು ಒಂದೆರಡು ದಿನಗಳಲ್ಲಿಯೇ ಗುವಾಹಾಟಿಯಿಂದ ಮುಂಬಯಿಗೆ ಬಂದು, ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಸಕ್ತ ವಾರಾಂತ್ಯದಲ್ಲೇ ಮುಖ್ಯಮಂತ್ರಿ ಉದ್ಧವ್‌ಗೆ ವಿಶ್ವಾಸ ಮತದ ಅಗ್ನಿಪರೀಕ್ಷೆ ಎದುರಾಗುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ.

ಮುಂಬಯಿಗೆ ಬರುವ ಇಬ್ಬರು ಶಾಸಕರು ಎಂವಿಎ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯುವ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಲಿದ್ದು, ಉದ್ಧವ್‌ ನೇತೃತ್ವದ ಎಂವಿಎ ಸರಕಾರವು ವಿಶ್ವಾಸಮತ ಕಳೆದುಕೊಂಡಿರುವ ಕುರಿತಾಗಿಯೂ ಪ್ರಸ್ತಾವಿಸಲಿದ್ದಾರೆ. ಹೀಗಾಗಿ ಈ ವಾರಾಂತ್ಯದಲ್ಲೇ ಅಥವಾ ಸುಪ್ರೀಂ ಕೋರ್ಟ್‌ನ ಮುಂದಿನ ವಿಚಾರಣೆ ನಡೆಯುವ ಮೊದಲೇ ಅಂದರೆ ಜು. 11ಕ್ಕೂ ಮುನ್ನವೇ ರಾಜ್ಯಪಾಲರು ವಿಧಾನಸಭೆ ಅಧಿವೇಶನ ಕರೆದು, ಹಂಗಾಮಿ ಸ್ಪೀಕರ್‌ ನೇಮಕ ಮಾಡುವ ಸಾಧ್ಯತೆಯಿದೆ. ಜತೆಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂಗೆ ಸೂಚಿಸುವ ಸಾಧ್ಯತೆಯೂ ನಿಚ್ಚಳವಾಗಿದೆ.

ಬಿಜೆಪಿ ಬೆಂಬಲ?
ಈ ಎಲ್ಲ ಬೆಳವಣಿಗೆಗಳ ನಡುವೆ ಸೋಮವಾರ ಸಂಜೆ 5ಕ್ಕೆ ಮಹಾರಾಷ್ಟ್ರ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆದಿದೆ. ಸದ್ಯಕ್ಕೆ ಶಿಂಧೆ ಬಣದಿಂದ ಯಾವುದೇ ಪ್ರಸ್ತಾವ ಬಂದಿಲ್ಲ. ನಾವು ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಭವಿಷ್ಯದಲ್ಲಿ ಪ್ರಸ್ತಾವ ಬಂದರೆ ಆಗ ನಿರ್ಧರಿಸುತ್ತೇವೆ ಎಂದು ಸಭೆಯ ಬಳಿಕ ಬಿಜೆಪಿ ನಾಯಕ ಮೃತ್ಯುಂಜಯ ಬೋಸ್‌ ಹೇಳಿದ್ದಾರೆ. ಆದರೆ ಗುವಾಹಾಟಿಯಿಂದ ಬಂಡಾಯ ಶಾಸಕರು ವಾಪಸ್‌ ಬರುವಾಗ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ನೀವೆಲ್ಲ ಮುಂಬಯಿ ಏರ್‌ಪೋರ್ಟ್‌ಗೆ ಹೋಗಬೇಕಾಗಿ ಬರಬಹುದು. ಅದಕ್ಕೆ ಸನ್ನದ್ಧರಾಗಿರಿ ಎಂದು ಕೋರ್‌ ಕಮಿಟಿಯಲ್ಲಿ ಪಕ್ಷದ ನಾಯಕತ್ವವು ಕಾರ್ಯಕರ್ತರಿಗೆ ಸೂಚಿಸಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಈ ನಡುವೆ ಶಿವಸೇನೆಗೆ ಮತ್ತೊಂದು ಆಘಾತ ಎಂಬಂತೆ ಪರ್ಭಾನಿಯ ಶಾಸಕ ರಾಹುಲ್‌ ಪಾಟೀಲ್‌ ಕೂಡ ಶಿಂಧೆ ಬಣವನ್ನು ಸೇರಲಿದ್ದಾರೆ ಎನ್ನಲಾಗಿದೆ.

Advertisement

ಅನರ್ಹತೆ ವಿಚಾರಣೆಗೆ ತಡೆ
ಸೋಮವಾರ ಶಿಂಧೆ ಬಣದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಜು. 11ರ ವರೆಗೆ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ್ದು, “ಅನರ್ಹತೆ’ ವಿಚಾರಣೆಗೆ ತಡೆ ನೀಡಿದೆ. ಜತೆಗೆ ಶಾಸಕರ ಪ್ರಾಣ, ಆಸ್ತಿಪಾಸ್ತಿ, ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿದೆ. ಇದೇ ವೇಳೆ ಅಸೆಂಬ್ಲಿಯಲ್ಲಿ ವಿಶ್ವಾಸಮತ ಸಾಬೀತು ಕುರಿತು ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next