ಮುಂಬಯಿ: ಮೇ 21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಗೆ ಕಣದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಇತರ 8 ಅಭ್ಯರ್ಥಿಗಳು ಮೇಲ್ಮನೆಗೆ ಅವಿರೋಧವಾಗಿ ಪ್ರವೇಶಿಸಲು ಸಜ್ಜಾಗಿದ್ದಾರೆ. 14 ನಾಮಪತ್ರಗಳಲ್ಲಿ ಐದನ್ನು ತಾಂತ್ರಿಕ ನೆಲೆಯಲ್ಲಿ ಹಿಂದೆಗೆದುಕೊಳ್ಳಲಾಗಿದೆ ಅಥವಾ ತಿರಸ್ಕರಿಸಲಾಗಿದೆ.
ಇದೀಗ 9 ಸ್ಥಾನಗಳಿಗೆ ಕೇವಲ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯು ಒಂಬತ್ತು ಸ್ಥಾನಗಳಿಗೆ ನಿಗದಿಯಾಗಿದ್ದು, ಇದಕ್ಕಾಗಿ 14 ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ ಬಿಜೆಪಿಯ ಡಾ| ಅಜಿತ್ ಗೋಪcಡೆ ಮತ್ತು ಸಂದೀಪ್ ಲೇಲೆ ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡಿದ್ದಾರೆ.
ಎನ್‌ಸಿಪಿಯಿಂದ ಕಿರಣ್ ಪವಾಸ್ಕರ್ ಮತ್ತು ಶಿವಾಜಿರಾವ್ ಗಾರ್ಜೆ ಸಲ್ಲಿಸಿದ ಎರಡು ನಕಲಿ ಫಾರ್ಮ್ಗಳನ್ನು ಕೂಡ ಮಂಗಳವಾರ ಹಿಂಪಡೆಯಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಶೆಹಬಾಜ್ ರಾಥೋಡ್ ಸಲ್ಲಿಸಿದ್ದ ಐದನೇ ನಾಮಪತ್ರವನ್ನು ತಾಂತ್ರಿಕ ನೆಲೆಯಲ್ಲಿ ತಿರಸ್ಕರಿಸಲಾಗಿದೆ, ಮೇಲ್ಕಂಡ ಒಂಬತ್ತು ಸ್ಥಾನಗಳಿಗೆ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇದರರ್ಥ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಎಲ್ಲ ಒಂಬತ್ತು ಅಭ್ಯರ್ಥಿಗಳು ರಾಜ್ಯ ವಿಧಾನಮಂಡಲದ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಿಟರ್ನಿಂಗ್ ಅಧಿಕಾರಿ ಸ್ಥಿತಿಯನ್ನು ಚುನಾವಣಾ ಆಯೋಗಕ್ಕೆ ತಿಳಿಸಲಿದ್ದು, ಮೇ 26ರೊಳಗೆ ಈ ಅಭ್ಯರ್ಥಿಗಳಿಗೆ ನಾಮನಿರ್ದೇಶನ ಪ್ರಮಾಣಪತ್ರ ನೀಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಶಿವಸೇನೆ ಮೇಲ್ಮನೆಗಾಗಿ ಠಾಕ್ರೆ ಮತ್ತು ವಿಧಾನ ಪರಿಷತ್ತಿನ ಉಪ ಸಭಾಧ್ಯಕ್ಷೆ ನೀಲಂ ಗೋರೆ ಅವರನ್ನು ಕಣಕ್ಕಿಳಿಸಿದೆ. ಎನ್‌ಸಿಪಿ ಅಮೋಲ್ ಮಿಟ್ಕರಿ ಮತ್ತು ಶಶಿಕಾಂತ್ ಶಿಂಧೆ ಅವರನ್ನು ನೇಮಕ ಮಾಡಿದ್ದರೆ, ಕಾಂಗ್ರೆಸ್ ರಾಜೇಶ್ ರಾಥೋಡ್ ಅವರನ್ನು ಆಯ್ಕೆ ಮಾಡಿದೆ.
ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಆಡಳಿತಾರೂಢ ಒಕ್ಕೂಟದ ಘಟಕಗಳಾಗಿವೆ. ರಮೇಶ್ ಕರಾಡ್, ಗೋಪಿಚಂದ್ ಪಡಲ್ಕರ್, ಪ್ರವೀಣ್ ದಾಟೆ ಮತ್ತು ರಂಜಿತ್ಸಿಂಗ್ ಮೋಹಿತೆ ಪಾಟೀಲ್ ಬಿಜೆಪಿ ನಾಮನಿರ್ದೇಶಿತರಾಗಿದ್ದಾರೆ. ಎ. 24 ರಂದು ಅಧೀಕಾರಾವಧಿ ಕೊನೆಗೊಂಡ ಮೇಲ್ಮನೆಯ ಒಂಬತ್ತು ಸದಸ್ಯರಲ್ಲಿ ಗೋರೆ ಒಬ್ಬರಾಗಿದ್ದಾರೆ. ಗೋರೆ ಅವರನ್ನು ಹೊರತುಪಡಿಸಿ ಠಾಕ್ರೆ ಸೇರಿದಂತೆ ಇತರ ಎಲ್ಲ ಅಭ್ಯರ್ಥಿಗಳು ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಲಿದ್ದಾರೆ.