ಲೋನವಾಲ: ಪುಣೆಯ ಲೋನವಾಲದ ನಗರ ಪರಿಷತ್‌ನ (ಎಲ್‌ಎನ್‌ಪಿ) ನೂತನ ಸರಕಾರಿ ಕಟ್ಟಡವನ್ನು ಜೂ. 1ರಂದು ಪೂರ್ವಾಹ್ನ ಮಹಾರಾಷ್ಟ್ರ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರೀಯ ಸಾಮಾಜಿಕ ನ್ಯಾಯ ಮತ್ತು ಅಧಿಕಾರಿತ ರಾಜ್ಯ ಸಚಿವ ರಾಮದಾಸ್ ಅಠವಳೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರುಗಳಾಗಿ ಸಾಮಾಜಿಕ ನ್ಯಾಯ ಖಾತೆಯ ರಾಜ್ಯಮಂತ್ರಿ ದಿಲೀಪ್ ಕಾಂಬ್ಳೆ, ನೀರಾವರಿ ಖಾತೆ ರಾಜ್ಯ ಸಚಿವ ವಿಜಯ್ ಶಿವ್‌ತಾರೆ, ಸ್ಥಾನೀಯ ಸಂಸದ ಸದಸ್ಯ ಶ್ರೀರಂಗ ಧರ್ಣೆ, ಸಂಸದ ಸದಸ್ಯ ಶ್ರೀರಂಗ್ ಭರ್ಣೆ, ಶಾಸಕ ಬಾಳಾ ಭೊಗ್ಡೆ, ಸಚಿವಾಲಯದ ಉನ್ನತಾಧಿಕಾರಿ ಮನೀಷಾ ಮ್ಹಾಹಿಸ್ಕರ್ ಹಾಗೂ ಲೋನವಾಲ ನಗರ ಪರಿಷತ್‌ನ ನಗರಾಧ್ಯಕ್ಷೆ ಸುರೇಖಾ ಜಾಧವ್ ಹಾಗೂ ಉಪಾಧ್ಯಕ್ಷ, ಬಿಜೆಪಿ ಧುರೀಣ ನಿಟ್ಟೆ ನಡಿಮನೆ ಶ್ರೀಧರ್ ಎಸ್. ಪೂಜಾರಿ ಮತ್ತು ಬಹುತೇಕ ಎಲ್‌ಎನ್‌ಪಿ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ನಿಮ್ಮೆಲ್ಲರ ಒಗ್ಗಟ್ಟಿನ ಪ್ರತೀಕವಾಗಿ ಇಂದು ಈ ಕಟ್ಟಡ ಲೋಕಾರ್ಪಣೆಗೊಳ್ಳುತ್ತಿರುವುದು ಅಭಿನಂದನೀಯ. ಪರಿಷತ್‌ನ ನಗರಾಧ್ಯಕ್ಷೆ ಸುರೇಖಾ ಜಾಧವ್ ಹಾಗೂ ಉಪಾಧ್ಯಕ್ಷ, ಬಿಜೆಪಿ ಧುರೀಣ ನಿಟ್ಟೆ ನಡಿಮನೆ ಶ್ರೀಧರ್ ಎಸ್. ಪೂಜಾರಿ ಅವರ ಸಮಾಜಪರ ಕಾರ್ಯಗಳಿಗೆ ಜನಸಾಮಾನ್ಯರ ಸಹಕಾರ ಸದಾಯಿರಲಿ. ನಿಮ್ಮೆಲ್ಲರ ಆಶಯಗಳಿಗೆ ಸರಕಾರ ಬದ್ಧವಾಗಿದೆ ಎಂದು ನುಡಿದು ಎಲ್ಲರನ್ನು ಅಭಿನಂದಿಸಿದರು.
ಎಲ್‌ಎನ್‌ಪಿಗೆ ಸತತ ಮೂರು ಬಾರಿ ಅತ್ಯಾಧಿಕ ಮತಗಳಿಂದ ಚುನಾಯಿತರಾದ ಶ್ರೀಧರ್ ಎಸ್. ಪೂಜಾರಿ ಅವರು ಸ್ಥಾನೀಯ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರು. ಇಲ್ಲಿನ ನಗರ ಪರಿಷತ್‌ನ ಕೆಲವೊಂದು ಹುದ್ದೆಗಳನ್ನು ಅಲಂಕರಿಸಿದ ಧೀಮಂತ ತುಳು ಕನ್ನಡಿಗ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಲೋನವಾಲ ಸ್ಥಳೀಯ ಸಮಿತಿಯ ಗೌರವ ಪ್ರದಾನ ಕಾರ್ಯದರ್ಶಿ ಆಗಿ ಶ್ರಮಿಸುತ್ತಿರುವ ಶ್ರೀಧರ್ ಇಲ್ಲಿನ ಜನಪ್ರಿಯ ನೇತಾರ ಹಾಗೂ ಉದ್ಯಮಿಯಾಗಿದ್ದಾರೆ.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್