ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಮುಗಿದು ಆರು ತಿಂಗಳು ಗತಿಸಿದರೂ ಸದಸ್ಯರಿಗೆ ಅಧಿಕಾರ ನೀಡುವಲ್ಲಿ ಸರಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಮುಖಂಡರು ಭಜನೆ ಮಾಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಗುರುವಾರ ಭಜನೆ ಮಾಡುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ನಡೆಸಲು ಎರಡೂವರೆ ವರ್ಷ, ಇದೀಗ ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಅಧಿಕಾರ ನೀಡುವ ಬಗ್ಗೆ ರಾಜ್ಯ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸ್ಥಳೀಯ ಸಂಸ್ಥೆ ಅಧಿಕಾರ ಮೊಟಕು ಹಾಗೂ ಅಧಿಕಾರ ವಿಕೇಂದ್ರೀಕರಣದ ವಿರುದ್ಧ ಇರುವ ಬಿಜೆಪಿ ಉದ್ದೇಶಪೂರ್ವಕವಾಗಿ ಅಧಿಕಾರ ನೀಡದಂತೆ ತಡೆ ಹಿಡಿದಿದೆ. ಏಪ್ರಿಲ್ 4ರೊಳಗೆ ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಪ್ರಕಾಶ ಬುರಬುರೆ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ನೀಡುವ ಕೆಲಸ ಅಗತ್ಯವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡುವುದು ಅಗತ್ಯವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗಳು ಮಹಾನಗರದಲ್ಲಿ ದೊಡ್ಡ ಅದ್ವಾನ ಸೃಷ್ಟಿಸಿದ್ದು, ಮುಗಿಯುವ ಹಂತದಲ್ಲಿದೆ. ಇದನ್ನು ಗಮನಿಸಿ ವೈಜ್ಞಾನಿಕವಾಗಿ ಕೆಲಸ ತೆಗೆದುಕೊಳ್ಳಬೇಕಾದ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೂ ಉಪಯೋಗವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಮಾತನಾಡಿ, ಬಿಜೆಪಿ ನಾಯಕರು ಸ್ಥಳೀಯ ಸಂಸ್ಥೆ ಹಾಗೂ ಅಧಿಕಾರ ವಿಕೇಂದ್ರೀಕರಣದ ವಿರೋಧಿಗಳು ಎಂಬುವುದು ಸ್ಪಷ್ಟವಾಗಿದೆ. ಸ್ಥಳೀಯ ಸಂಸ್ಥೆಗಳ ಮೇಲೆ ಗೌರವ ಇಲ್ಲದಿದ್ದರೆ ಚುನಾವಣೆ ಮಾಡಬಾರದಿತ್ತು. ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡಲು ಹಿಂದಿರುವ ರಾಜಕಾರಣವೇನು ಎಂಬುವುದು ಅರ್ಥವಾಗುತ್ತಿಲ್ಲ. ಈ ವಿಚಾರದಲ್ಲಿ ಸ್ಥಳೀಯ ಬಿಜೆಪಿ ಶಾಸಕರು, ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಮಹೇಂದ್ರ ಸಿಂಘಿ, ಇಕ್ಬಾಲ್ ನವಲೂರು, ಮಂಗಳಾ ಹಿರೇಮನಿ, ಸಂದಿಲ್ ಕುಮಾರ, ಪ್ರಕಾಶ ಕುರಹಟ್ಟಿ, ಶ್ರುತಿ ಛಲವಾದಿ, ನಿರಂಜನ ಹಿರೇಮಠ ಸೇರಿದಂತೆ ಇನ್ನಿತರರಿದ್ದರು.