Advertisement

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

03:04 AM Jan 15, 2025 | Team Udayavani |

ಹುಬ್ಬಳ್ಳಿ: ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ವಿಶ್ವಶಾಂತಿಗಾಗಿ ಜ. 15ರಿಂದ ಮಹಾಮಸ್ತಕಾ ಭಿಷೇಕ ಹಾಗೂ ಸುಮೇರು ಪರ್ವತ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಉಪರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

Advertisement

ರಾಷ್ಟ್ರಸಂತ ಆಚಾರ್ಯ ಶ್ರೀಗುಣಧರ ನಂದಿ ಮಹಾರಾಜರ ನೇತೃತ್ವ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಜ. 26ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

12 ವರ್ಷಗಳ ಅನಂತರ ಕ್ಷೇತ್ರದಲ್ಲಿ 61 ಅಡಿ ಎತ್ತರದ ಭಗವಾನ್‌ ಶ್ರೀಪಾರ್ಶ್ವನಾಥರ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಇದರೊಂದಿಗೆ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹಾಮಹೋತ್ಸವ ಜರಗಲಿದೆ. ರಾಜ್ಯ-ಹೊರರಾಜ್ಯ ಹಾಗೂ ವಿದೇಶಗಳಿಂದ ಭಕ್ತರು ಆಗಮಿಸಿದ್ದಾರೆ. 12 ದಿನಗಳ ಕಾಲ ನಡೆಯುವ ಸಮಾರಂಭಕ್ಕೆ ಕ್ಷೇತ್ರ ಸಿಂಗಾರಗೊಂಡಿದೆ.

ಹಲವು ಗಣ್ಯರು ಭಾಗಿ
ಮೊದಲ ದಿನ ಜ. 15ರಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಆಗಮಿಸಲಿದ್ದಾರೆ. ಜ.16ರಂದು ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಪಾಲ್ಗೊಳ್ಳುವರು. 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, 22ರಂದು ಆರೆಸ್ಸೆಸ್‌ ಪ್ರಮುಖರಾದ ಮಂಗೇಶ ಭೇಂಡೆ, 23ಕ್ಕೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಸಚಿವ ಸಂತೋಷ ಲಾಡ್‌ ಸೇರಿದಂತೆ ಹಲವು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ-ಸಂಗೀತ ಕಾರ್ಯಕ್ರಮ
ನಿತ್ಯವೂ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಜ.17ರಂದು ಗಾಯಕರಾದ ವಿಜಯಪ್ರಕಾಶ, ಅನುರಾಧ ಭಟ್ಟ, 20ಕ್ಕೆ ಅರ್ಜುನ ಜನ್ಯ, ಅನುಶ್ರೀ, 22ರಂದು ಗಾಯಕ ರಾಜೇಶ ಕೃಷ್ಣನ್‌, 23ಕ್ಕೆ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ರಘು ದೀಕ್ಷಿತ, 24ಕ್ಕೆ ತರುಣ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಸೇರಿದಂತೆ ಹಲವು ಕಲಾವಿದರು ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Advertisement

12 ದಿನ ವಿವಿಧ ಕಾರ್ಯಕ್ರಮ
ಜ. 15ರಿಂದ 20ರ ವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. 15 ಹಾಗೂ 16ರಂದು ಭಗವಾನ್‌ ಪಾರ್ಶ್ವನಾಥ ತೀರ್ಥಂಕರ ಗರ್ಭಕಲ್ಯಾಣ ಮಹೋತ್ಸವ, 17ರಂದು ಪಾರ್ಶ್ವನಾಥರ ರಾಜ್ಯಾಭಿಷೇಕ, 19ರಂದು ಕೇವಲ ಜ್ಞಾನ, 20ರಂದು ಮೋಕ್ಷಕಲ್ಯಾಣ ಮಹೋತ್ಸವ ನಡೆಯಲಿದೆ. 20ರ ನಂತರ ಕ್ಷೇತ್ರದ ನವಗ್ರಹದ ತೀರ್ಥಂಕರರಿಗೆ ನಿತ್ಯ ಅಭಿಷೇಕ ನಡೆಯಲಿದೆ.

21ರಂದು ಜನಸಾಮಾನ್ಯರಿಂದ ಕ್ಷೇತ್ರದ 9 ತೀರ್ಥಂಕರ ಮೂರ್ತಿಗಳಿಗೆ ಜಲಾಭಿಷೇಕ ನಡೆಯಲಿದೆ. 22ರಂದು ಮೂರ್ತಿಗಳ ದಾನಿಗಳಿಂದ ಅಭಿಷೇಕ ನಡೆಯಲಿದೆ. 22 ಹಾಗೂ 23ರಂದು ಹೆಲಿಕಾಪ್ಟರ್‌ಗಳ ಮೂಲಕ ತೀರ್ಥಂಕರರ ಮೇಲೆ ಪುಷ್ಪಾರ್ಚನೆ ನಡೆಯಲಿದೆ. 23ರಂದು ಮುಂಜಿ ಬಂಧ, ಮಂತ್ರ ಸಂಸ್ಕಾರ ಹಾಗೂ ವೃತ ಸಂಸ್ಕಾರ ನಡೆಯಲಿದೆ. ಹಲವು ಮಠಾಧೀಶರು, ಆಚಾರ್ಯರು ಪಾಲ್ಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next