Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
405 ಅಡಿ ಎತ್ತರದ ಸುಮೇರು ಪರ್ವತಕ್ಕೆ ಪೂಜೆ ಸಲ್ಲಿಸಿದ ಆಚಾರ್ಯರು, ರಾಜಭವನ ಮಾಂಸಾಹಾರ, ವ್ಯಸನಗಳಿಂದ ಮುಕ್ತ: ಗೆಹ್ಲೋಟ್
Team Udayavani, Jan 16, 2025, 2:14 AM IST
ಹುಬ್ಬಳ್ಳಿ: ಇಲ್ಲಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆರಂಭವಾಗಿರುವ 12 ದಿನಗಳ ಮಹಾಮಸ್ತಕಾಭಿಷೇಕ ಹಾಗೂ ಸುಮೇರು ಪರ್ವತ ಲೋಕಾರ್ಪಣೆ ಸಮಾರಂಭಕ್ಕೆ ಬುಧವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸತ್ಯ-ಅಹಿಂಸೆ-ಧರ್ಮ ಮಾರ್ಗದಲ್ಲಿ ನಡೆಯಬೇಕು. ಜೈನ ಸಮುದಾಯ ಪಾಲನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರಾಜಭವನವನ್ನು ಮಾಂಸಾಹಾರ, ವ್ಯಸನ ಮುಕ್ತ ಮಾಡಲಾಗಿದೆ. ವಿದೇಶದಿಂದ ಅತಿಥಿಗಳು ಬಂದರೂ ಅವರಿಗೆ ಸಸ್ಯಾಹಾರ ನೀಡಲಾಗುತ್ತಿದೆ. ಪರಿಸರ-ಪ್ರಾಣಿ ಪೂಜಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಆಗಬೇಕು ಎಂದರು.
ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಭಾಗಗಳಿಂದ ಆಗಮಿಸಿರುವ ಆಚಾರ್ಯರು 405 ಅಡಿ ಎತ್ತರದ ಸುಮೇರು ಪರ್ವತಕ್ಕೆ ಪೂಜೆ ಸಲ್ಲಿಸಿದರು. ಧರ್ಮಸಭೆ ನಡೆಯುವ ಮಹಾಮಂಟಪದ ಉದ್ಘಾಟನೆ ನೆರವೇರಿತು. ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಮಹಾಮಂಪಟದ ಉದ್ಘಾಟನೆ ನೆರವೇರಿಸಿದರು.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ನವಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮುನಿ ಮಹಾರಾಜರು ನೇತೃತ್ವ ವಹಿಸಿದ್ದರು. ಹಿರಿಯ ಜೈನ ಆಚಾರ್ಯರಾದ ಶ್ರೀ ಕುಂಥುಸಾಗರ ಮಹಾರಾಜರು ಸಾನಿಧ್ಯ ವಹಿಸಿದ್ದರು. ವಿವಿಧ ಭಾಗಗಳಿಂದ ಆಗಮಿಸಿರುವ ಆಚಾರ್ಯರು ಉಪಸ್ಥಿತರಿದ್ದರು.