ಬೆಂಗಳೂರು: ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕೇವಲ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಇಡೀ ದೇಶಕ್ಕೆ ಸಂಬಂಧಿಸಿದ ಉತ್ಸವ ಹಾಗೂ ಶ್ರದ್ಧಾಚಾರಣೆ. ಹಾಗಾಗಿ ಕೇಂದ್ರ ಸರ್ಕಾರವೂ ಇದಕ್ಕೆ ನೆರವು ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಹಾಗೂ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರದ ಅನುದಾನದ ಜತೆಗೆ ಕೇಂದ್ರವೂ ಅನುದಾನ ನೀಡಬೇಕು ಎಂದರು.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಈ ಬಾರಿ 2018ರಲ್ಲಿ ನಡೆಯಲಿದೆ. ಅದನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ 175 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಇದು ಕರ್ನಾಟಕಕ್ಕೆ ಸಿಮೀತವಾದ ಸಂಭ್ರಮ ಅಲ್ಲ. ಮಹಾಮಸ್ತಕಾಭೀಷಕದಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಜನರು ಬರುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರವೂ ಇದಕ್ಕೆ ನೆರವು ನೀಡಬೇಕು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕಳೆದ ಬಾರಿಯ (2006) ಮಹಾಮಸ್ತಕಾಭಿಷೇಕಕ್ಕೆ ಆಗ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿದ್ದ ಸಿದ್ದರಾಮಯ್ಯನವರು 24 ಕೋಟಿ ರೂ. ಕೊಟ್ಟಿದ್ದರು. ಆಗ ಕೇಂದ್ರ ಸರ್ಕಾವೂ 90 ಕೋಟಿ ರೂ. ನೆರವು ನೀಡಿತ್ತು. ಆದರೆ, ಈ ಬಾರಿ ರಾಜ್ಯ ಸರ್ಕಾರವೇ 175 ಕೋಟಿ ರೂ. ಒದಗಿಸಿದೆ ಎಂದರು.
ಇದೇ ವೇಳೇ ಮಾತನಾಡಿದ ವಿಧಾನಪರಿಷತ್ ಸದಸ್ಯ ಲೆಹರ್‌ಸಿಂಗ್, ಮಹಾಮಸ್ತಕಾಭಿಷೇಕಕ್ಕೆ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗೋಣ ಎಂದರು.
ಸಿದ್ದಗಂಗಾ ಶ್ರೀಗಳಿಗೆ ಮಠದಲ್ಲೇ ಪ್ರಶಸ್ತಿ ಪ್ರದಾನ: ಇದೇ ವೇಳೆ ಮಾತನಾಡಿದ ಸಚಿವೆ ಉಮಾಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ತುಮಕೂರಿನ ಸಿದ್ಧಗಂಗಾ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಶ್ರೀಗಳಿಗೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ಸಿದ್ದಗಂಗಾಮಠದಲ್ಲಿಯೇ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಾಗವುದು ಎಂದರು.