ಮಹಾಲಿಂಗಪುರ: ಪಟ್ಟಣದ ನೂತನ ಬಸ್ ನಿಲ್ದಾಣವು ಎರಡು ವರ್ಷಗಳ ಹಿಂದೆ (19-02-2023) ಉದ್ಘಾಟನೆಯಾದ ನೂತನ ಬಸ್ ನಿಲ್ದಾಣದಲ್ಲಿ ಇಂದಿಗೂ ಹತ್ತು ಹಲವು ಸಮಸ್ಯೆಗಳಿವೆ.
ಮಳೆಗಾಲದಲ್ಲಿ ನೂತನ ಬಸ್ ನಿಲ್ದಾಣದ ಮೇಲ್ಛಾವಣಿ ಸೋರುತ್ತಿದೆ. ಮೇಲ್ಛಾವಣಿ ನೀರು ಒಂದು ಕಡೆ ಹೋಗುವಂತೆ ವ್ಯವಸ್ಥೆ ಇಲ್ಲದ ಕಾರಣ ಗೋಡೆಗಳು ಸೋರುತ್ತಿವೆ. ಮುಖ್ಯವಾಗಿ ನಿಲ್ದಾಣದ ಮೇಲ್ಭಾಗಕ್ಕೆ ಹೋಗಲು ಮೆಟ್ಟಿಲುಗಳನ್ನು ಮಾಡಿಲ್ಲ. ಇದರಿಂದ ಸಕಾಲಕ್ಕೆ ಕುಡಿವ ನೀರಿನ ಟ್ಯಾಂಕ್ ತೊಳೆಯಲು ಮೇಲೆ ಹೋಗಲು ಆಗುತ್ತಿಲ್ಲ. ಇದರಿಂದ ಇಲ್ಲಿನ ಕುಡಿವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಕಾಪಾಡುವುದು ಅಸಾಧ್ಯವಾಗಿದೆ.
3 ಕೋಟಿ ವೆಚ್ಚದ ಬಸ್ ನಿಲ್ದಾಣ : ಸುಮಾರು 3 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣವಾಗಿದ್ದರೂ ಸಹ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯಾವುದೇ ಕಾಮಗಾರಿಯು ಇಲ್ಲಿ ನಡೆದಿಲ್ಲ ಎಂಬುವದು ವಿಪರ್ಯಾಸದ ಸಂಗತಿ. ಮಳೆಗಾಲದಲ್ಲಿ ನೂತನ ಬಸ್ ನಿಲ್ದಾಣದ ಮೇಲ್ಛಾವಣೆಯು ಸೋರುತ್ತಿದೆ. ಮೇಲ್ಚಾವಣೆಯ ನೀರು ಒಂದು ಕಡೆ ಹೋಗುವಂತೆ ವ್ಯವಸ್ಥೆ ಇಲ್ಲದ ಕಾರಣ, ನೀರು ನಿಂತು ಕೇವಲ 2 ವರ್ಷಗಳಲ್ಲಿಯೇ ಬಸ್ ನಿಲ್ದಾಣದ ಗೋಡೆಗಳು ಸೂರುತ್ತಿವೆ. ಮುಖ್ಯವಾಗಿ ನಿಲ್ದಾಣದ ಮೇಲ್ಭಾಗಕ್ಕೆ ಹೋಗಲು ಮೆಟ್ಟಿಲುಗಳನ್ನು ಮಾಡಿಲ್ಲ. ಇದರಿಂದಾಗಿ ಸಕಾಲಕ್ಕೆ ಕುಡಿಯುವ ನೀರಿನ ಟ್ಯಾಂಕ್ ತೊಳೆಯಲು ಮೇಲೆ ಹೋಗಲು ಆಗುತ್ತಿಲ್ಲ. ಇದರಿಂದಾಗಿ ಇಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆಯು ಕಾಪಾಡುವದು ಅಸಾಧ್ಯವಾಗಿದೆ.
ಲೋಕಲ್ ಶೆಲ್ಟರ್ ನಿರ್ಮಾಣ ಅಗತ್ಯ: ಮಹಾಲಿಂಗಪುರ ಬಸ್ ನಿಲ್ದಾಣದಿಂದ ಮುಧೋಳ, ಜಮಖಂಡಿಗೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವುದರಿಂದ ಮುಧೋಳ, ಜಮಖಂಡಿ ಲೋಕಲ್ ಬಸ್‌ಗಳು ಅತಿ ಹೆಚ್ಚಿಗೆ ಓಡಾಡುತ್ತವೆ. ಆದರೆ ನೂತನ ಬಸ್ ನಿಲ್ದಾಣದ ನಿರ್ಮಾಣದ ಸಮಯದಲ್ಲಿ ಉತ್ತರ ಭಾಗಕ್ಕೆ ಜಮಖಂಡಿಗೆ ತೆರಳುವ ಬಸ್‌ಗಳು ನಿಲ್ಲುವ ಶೆಲ್ಟರ್, ದಕ್ಷಿಣ ಭಾಗಕ್ಕೆ ಮುಧೋಳಕ್ಕೆ ತೆರಳುವ ಲೋಕಲ್ ಬಸ್‌ಗಳ ನಿಲುಗಡೆಗೆ ಹಾಗೂ ಪ್ರಯಾಣಿಕರು ಕುಳಿತುಕೊಳ್ಳಲು ಶೆಲ್ಟರ್ ನಿರ್ಮಿಸಲು ಸಾರಿಗೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಹೇಳಿದರೂ ಹಾರಿಕೆ ಉತ್ತರ ನೀಡಿದರೇ ಹೊರತು ಇಂದಿಗೂ ಅವುಗಳ ನಿರ್ಮಾಣದ ಕೆಲಸ ಆಗಿಲ್ಲ. ಜಮಖಂಡಿ-ಮುಧೋಳಕ್ಕೆ ತೆರಳುವ ಪ್ರಯಾಣಿಕರು ಬಯಲು, ಬಿಸಿಲಿನಲ್ಲೇ ನಿಲ್ಲುವಂತಾಗಿದೆ. ಇಲ್ಲವೇ ನಿಲ್ದಾಣದಲ್ಲಿ ಕುಳಿತರೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಓಡೋಡಿ ಹೋಗುವಂತಾಗಿದೆ.
ಗಬ್ಬೆದ್ದು ನಾರುವ ಶೌಚಾಲಯ: ಬಸ್ ನಿಲ್ದಾಣ ಹಳೆಯ ಶೌಚಾಲಯವೇ ಇದೆ ಹೊರತು ಹೊಸ ಶೌಚಾಲಯ ನಿರ್ಮಾಣವಾಗಿಲ್ಲ. ಮುಖ್ಯವಾಗಿ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ. ಗುತ್ತಿಗೆದಾರರು ಟೆಂಡರ್ ದರಕ್ಕಿಂತ ಹತ್ತು ಪಟ್ಟು ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ. ಮುಖ್ಯವಾಗಿ ಮಹಿಳಾ ಶೌಚಾಲಯಕ್ಕೆ ಮಹಿಳಾ ಸಿಬ್ಬಂದಿ ಇಲ್ಲ. ಮಹಿಳೆಯರಿಂದ ಮನಬಂದಂತೆ ಹಣ ವಸೂಲಿ ಮಾಡಲಾಗುತ್ತಿದೆ. ಜತೆಗೆ ಮಹಿಳಾ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಪಟ್ಟಣದ ವಿವಿಧ ಸಂಘಟನೆಗಳ ಸದಸ್ಯರು ಹೆಚ್ಚಿಗೆ ಹಣ ಪಡೆಯುವ ಕುರಿತು, ಮತ್ತು ಸ್ವಚ್ಛತೆಗೆ ನಿಲ್ದಾಣ ನಿಯಂತ್ರರಿಗೆ, ಗುತ್ತಿಗೆದಾರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶೌಚಾಲಯ ಗುತ್ತಿಗೆದಾರರೇ ನಿತ್ಯ ನಿಲ್ದಾಣದ ಸ್ವತ್ಛತೆ ಮಾಡಬೇಕು. ನಿಲ್ದಾಣದ ಸ್ವತ್ಛತೆ ಇಡುವಲ್ಲಿ ವಿಫಲವಾಗಿದ್ದಾರೆ. ನಿಲ್ದಾಣದ ಮೇಲ್ಛಾವಣಿ ಧೂಳು, ಜಾಡಬುಡಿ ನೋಡುವಂತಿಲ್ಲ. ನಿಲ್ದಾಣ ನಿಯಂತ್ರಕರು ಸ್ವತ್ಛತೆ ಮಾಡಲು ಹೇಳಿದರೂ ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ.
ರಾತ್ರಿ ವೇಳೆ ನಿಲ್ದಾಣ ನಿಯಂತ್ರಕರಿರಲ್ಲ: ಪಟ್ಟಣದ ಬಸ್ ನಿಲ್ದಾಣಕ್ಕೆ ಇಬ್ಬರು ನಿಲ್ದಾಣ ನಿಯಂತ್ರಕರಿದ್ದರೂ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ನಿಲ್ದಾಣ ನಿಯಂತ್ರಕರು ಇರಲ್ಲ. ಮುಖ್ಯವಾಗಿ ನಿಲ್ದಾಣಕ್ಕೆ ಓರ್ವ ಸೆಕ್ಯೂರಿಟಿ ಗಾರ್ಡ್ ಅಗತ್ಯವಿದೆ. ಉತ್ತರ-ದಕ್ಷಿಣ ಭಾಗದಲ್ಲಿರುವ ಖಾಲಿ ಜಾಗೆಯಲ್ಲಿ ಖಾಸಗಿ ವಾಹನಗಳ ನಿಲುಗಡೆ ಹೆಚ್ಚಿರುವುದರಿಂದ ನಿಲ್ದಾಣ ನಿಯಂತ್ರಕರಿಗೆ ಕಿರಿಕಿರಿಯಾಗಿದೆ. ಕೆಲವು ದಿನ ಸಂಜೆ 5ರಿಂದ ಮರುದಿನ ಬೆಳಗಿನವರೆಗೂ ನಿಯಂತ್ರಕರು ಇರಲ್ಲ.
ಕಾಂಪೌಂಡ್ ಎತ್ತರಿಸಬೇಕು: ಬಸ್ ನಿಲ್ದಾಣದ ಪೂರ್ವ ಭಾಗಕ್ಕೆ ಇರುವ ಕಾಂಪೌಂಡ್ ಗೋಡೆ ಕೆರೆಯ ಒಡ್ಡಿಗೆ ಹತ್ತಿಕೊಂಡಿರುವ ಕಾರಣ ನಿಲ್ದಾಣದಿಂದ ಕೆರೆಗೆ ಮತ್ತು ಕೆರೆ ಮೇಲಿಂದ ಬಸ್ ನಿಲ್ದಾಣದೊಳಗೆ ಬರಲು ಸುಲಭ ಮಾರ್ಗ ಇರುವುದರಿಂದ ಪುಂಡ-ಪೋಕರಿಗಳ ಕಾಟ ಹೆಚ್ಚಾಗಿದೆ. ಇನ್ನು ಕೆಲವರು ಕೆರೆ ಮೇಲೆ ಬಯಲು ಶೌಚಕ್ಕೆ ಹೋಗುತ್ತಿರುವ ಕಾರಣ ಬಸ್ ನಿಲ್ದಾಣದ ಪೂರ್ವ ಭಾಗದಲ್ಲಿನ ಕಾಂಪೌಂಡ್ ಗೋಡೆಯನ್ನು ಇನ್ನು 4-5 ಅಡಿಯಷ್ಟು ಎತ್ತರಿಸುವುದು ಅಗತ್ಯವಾಗಿದೆ.
ರಾತ್ರಿ ಬಸ್‌ಗಳು ಇಲ್ಲದೇ ಪರದಾಟ: ಪಟ್ಟಣ ಶಿಕ್ಷಣ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಪಟ್ಟಣದ ಜನತೆ ನಿತ್ಯ ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬೆಳಗಾವಿ, ಮಹಾರಾಷ್ಟ್ರದ ಕೊಲ್ಹಾಪುರ, ಇಚಲಕರಂಜಿ, ಮಿರಜ, ಸಾಂಗಲಿ, ಸೋಲ್ಲಾಪುರಗಳಿಗೆ ಸಂಚರಿಸುವುದು ಸಾಮಾನ್ಯವಾಗಿದೆ. ಸಂಜೆ 6 ಗಂಟೆ ನಂತರ ಚಿಕ್ಕೋಡಿಗೆ ತೆರಳಲು, ಮರಳಿ ಬರಲು ಯಾವುದೇ ಬಸ್ ಇಲ್ಲ. ಮಹಾಲಿಂಗಪುರದಿಂದ ನೇರವಾಗಿ ಅಥಣಿಗೆ ತೆರಳುವ ಬಸ್ ಇಲ್ಲ. ರಾತ್ರಿ 9ರ ನಂತರ ಮುಧೋಳ, ಜಮಖಂಡಿಯಿಂದ ಪಟ್ಟಣಕ್ಕೆ ಬಸ್‌ಗಳು ಇಲ್ಲದ ಕಾರಣ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ.
ಕ್ಯಾಂಟೀನ್ ಬಂದ್: ಟೆಂಡರ್ ಮುಗಿದ ಕಾರಣ ಎರಡು ತಿಂಗಳಿಂದ ನಿಲ್ದಾಣದಲ್ಲಿ ಕ್ಯಾಂಟೀನ್ ಬಂದ್ ಆಗಿದೆ. ವಾಣಿಜ್ಯ ಮಳಿಗೆ ಬಿಟ್ಟು ಖಾಲಿ ಜಾಗೆಯಲ್ಲಿ ಡಬ್ಟಾ ಅಂಗಡಿಗೆ ಹೆಚ್ಚಿನ ಅವಕಾಶ ನೀಡಿದ್ದರಿಂದ ನಿಲ್ದಾಣದ ಸುತ್ತಲೂ 4 ಡಬ್ಟಾ ಅಂಗಡಿಗಳೇ ಹೆಚ್ಚಾಗಿ ನಿಲ್ದಾಣದ ಸೌಂದರ್ಯ ಹಾಳಾಗುತ್ತಿದೆ. ಜಿಲ್ಲಾ-ತಾಲೂಕು ಕೇಂದ್ರದ ಮಾದರಿಯಲ್ಲಿ ಬಾಡಿಗೆ ಹೆಚ್ಚಿಸಿದ್ದರಿಂದ ದುಬಾರಿ ಬಾಡಿಗೆ ನೀಡಿ ಬುಕ್ ಸ್ಟಾಲ್, ದಿನಪತ್ರಿಕೆ ಮಳಿಗೆ ಹಾಕಲು ಸಾಧ್ಯವಾಗುತ್ತಿಲ್ಲ. ಕೋವಿಡ್ ನಂತರ ಪತ್ರಿಕೆಗಳು, ಪುಸ್ತಕಗಳ ಮಾರಾಟ ಕಡಿಮೆಯಾದ ಕಾರಣ ರಿಯಾಯಿತಿ ದರದಲ್ಲಿ ಬುಕ್‌ಸ್ಟಾಲ್‌ಗೆ ಹಾಕಲು ಅವಕಾಶ ನೀಡಬೇಕೆಂದು ಪತ್ರಿಕಾ ಏಜೆಂಟ್ ಅಶೋಕ ಕಡಪಟ್ಟಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ವಿನಂತಿಸಿದ್ದಾರೆ.
ಈ ಮಾರ್ಗದ ಬಸ್‌ಗಳ ಆರಂಭಕ್ಕೆ ಒತ್ತಾಯ
ಮೊದಲಿದ್ದ ಕೆಲ ಬಸ್‌ಗಳನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದ ಬಸ್ ಗಳನ್ನು ಆರಂಭಿಸಬೇಕೆಂಬುದು ಮಹಾಲಿಂಗಪುರದ ನಾಗರಿಕರ ಒತ್ತಾಯ. ಬೆಳಿಗ್ಗೆ 5-45ಕ್ಕೆ ಮಹಾಲಿಂಗಪುರ-ಬೆಳಗಾವಿ, 6-15ಕ್ಕೆ ಬನಹಟ್ಟಿ ಬೆಳಗಾವಿ, 6ಕ್ಕೆ ತೇರದಾಳ-ಧಾರವಾಡ, 6ಕ್ಕೆ ಮಹಾಲಿಂಗಪುರ-ಅಥಣಿ, ಮಹಾಲಿಂಗಪುರ-ಚಿಕ್ಕೋಡಿ, ಬೆಳಿಗ್ಗೆ8ಕ್ಕೆ ಮಹಾಲಿಂಗಪುರ-ಹುಬ್ಬಳ್ಳಿ(ಯರಗಟ್ಟಿ ಮಾರ್ಗ) ಬೆಳಿಗ್ಗೆ 11ಕ್ಕೆ ಮಹಾಲಿಂಗಪುರ-ಹುಬ್ಬಳ್ಳಿ(ರಾಮದುರ್ಗ ಮಾರ್ಗ), ಮಧ್ಯಾಹ್ನ 12 ಮತ್ತು 1ಕ್ಕೆ ಮಹಾಲಿಂಗಪುರ-ಅಥಣಿ (ಮುಗಳಖೋಡ ಮಾರ್ಗ), ಸಂಜೆ 4-30ಕ್ಕೆ ಮಹಾಲಿಂಗಪುರ- ಜಮಖಂಡಿ, ರಾತ್ರಿ 7-30ಕ್ಕೆ ಚಿಂಚೋಳಿ-ನಿಪ್ಪಾಣಿ, ರಾತ್ರಿ 8ಕ್ಕೆ ಮಹಾಲಿಂಗಪುರ-ಚಿಕ್ಕೋಡಿ, ರಾತ್ರಿ 8ಕ್ಕೆ ಜಮಖಂಡಿ-ಬೆಳಗಾವಿ ಮಾರ್ಗದ ನೂತನ ಬಸ್‌ಗಳನ್ನು ಆರಂಭಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ತೇರದಾಳ ಮತಕ್ಷೇತ್ರದ ಶಾಸಕರು, ಜಿಲ್ಲೆಯ ಸಚಿವರು, ಸಾರಿಗೆ ಇಲಾಖೆಯ ಮುಧೋಳ ಮತ್ತು ಬಾಗಲಕೋಟೆ ವಿಭಾಗದ ಅಧಿ ಕಾರಿಗಳು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಿದೆ.
■
ಚಂದ್ರಶೇಖರ ಮೋರೆ