ಮಹಾಲಿಂಗಪುರ: ಮಹಾಲಿಂಗಪುರ ಪಟ್ಟಣ ನೂತನ ತಾಲೂಕು ಆಗಲಿ ಇಲ್ಲವೇ ಮೊದಲಿನಂತೆ ಮುಧೋಳ ತಾಲೂಕಿನಲ್ಲಿಯೇ ಉಳಿಯಲಿ ಎಂದು ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಸರ್ಕಾರಕ್ಕೆ ಒತ್ತಾಯಿಸಿದರು.
ರವಿವಾರ ಪಟ್ಟಣದ ಟೊಣಪಿನಾಥ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜರುಗಿದ ಸಭೆಯಲ್ಲಿ ತೇರದಾಳ ಪಟ್ಟಣವನ್ನು ತಾಲೂಕು ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ನಿಯೋಜಿತ ತೇರದಾಳ ತಾಲೂಕಿಗೆ ಸೇರ್ಪಡೆಗೊಳಿಸುವ ಪ್ರಸ್ತಾವಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳನ್ನು ತೇರದಾಳಕ್ಕೆ ಸೇರಿಸಿದರೆ ಜೀವ ಕೊಡುತ್ತೇವೆಯೇ ವಿನ: ತೇರದಾಳ ತಾಲೂಕಿಗೆ ಸೇರಿಸಲು ಒಪ್ಪುವದಿಲ್ಲ. ಒಂದು ವೇಳೆ ಸೇರಿಸಿದರೆ ಉಗ್ರ ಹೋರಾಟ ಮಾಡಲಾಗುವದು. ಸರ್ಕಾರ ಈ ಪ್ರಸ್ತಾವವನ್ನು ತತಕ್ಷಣ ಕೈಬಿಡಬೇಕು.ಈ ಕುರಿತಾಗಿ ಶಾಸಕ ಸಿದ್ದು ಸವದಿಯವರಿಗೆ ಮನವರಿಕೆ ಮಾಡಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಕಾಂಗ್ರೆಸ್ ಮುಖಂಡ ಧರೆಪ್ಪ ಸಾಂಗಲಿಕರ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶೇಖರ ಅಂಗಡಿ, ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಜಯರಾಮಶೆಟ್ಟಿ ಮಾತನಾಡಿ ಸುಮಾರು 30 ವರ್ಷಗಳ ಹಿಂದೆಯೇ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರು ಮಹಾಲಿಂಗಪುರ ಹಾಗೂ ಇಲಕಲ್ ತಾಲೂಕು ಆಗಬೇಕೆಂದು ಒತ್ತಾಯಿಸಿದ್ದರು. ಮಹಾಲಿಂಗಪುರ ತಾಲೂಕನ್ನಾಗಿ ಘೋಷಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಮನವಿ ಮೇರೆಗೆ 2019 ರಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿಷಯವನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರು.ಇಂತಹ ಹೋರಾಟದ ಇತಿಹಾಸ ಇರುವ ಮಹಾಲಿಂಗಪುರವನ್ನು ಕೂಡಲೇ ತಾಲೂಕು ಅಂತಾ ಘೋಷಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ಮದ್ಯ ವ್ಯಸನಿ ತಾಯಿ ಮೇಲೆ ಪುತ್ರನಿಂದ ಹಲ್ಲೆ : ಪೆಟ್ಟು ಬಿದ್ದ ತಾಯಿ ಸಾವು
ಮುಖಂಡರಾದ ಡಾ.ಎ.ಆರ್.ಬೆಳಗಲಿ, ಸಜನಸಾಬ ಪೆಂಡಾರಿ, ಸಂಗಪ್ಪ ಹಲ್ಲಿ, ಜಿ.ಎಸ್.ಗೊಂಬಿ, ಮಲ್ಲಪ್ಪ ಸಿಂಗಾಡಿ, ಶಿವಾನಂದ ತಿಪ್ಪಾ, ಮನೋಹರ ಶಿರೊಳ, ಗಂಗಾಧರ ಮೇಟಿ, ಮಹಾದೇವ ಮಾರಾಪೂರ, ಹಣಮಂತ ಜಮಾದಾರ, ವಿರೇಶ ಆಸಂಗಿ, ಸಿದ್ದು ಶಿರೊಳ, ಅಶೋಕ ಅಂಗಡಿ, ಗುರುಪಾದ ಅಂಬಿ, ಎಫ್.ಎಚ್.ಕುಂಟೋಜಿ, ಮಲ್ಲು ಸಂಗಣ್ನವರ, ಬಂದು ಪಕಾಲಿ ಮಾತನಾಡಿ ಸಲಹೆ-ಸೂಚನೆ ನೀಡಿದರು.ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಮಾರ್ಚ 30ರ ಬುಧವಾರ ಮತ್ತೆ ಸಭೆ ಸೇರಲು ತೀರ್ಮಾನಿಸಲಾಯಿತು.
ಪಟ್ಟಣದ ಹಿರಿಯ ಮುಖಂಡರಾದ ಬಸನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ಎಸ್.ಎಮ್.ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಗೋಲೇಶ ಅಮ್ಮಣಗಿ, ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಲಾತೂರ, ನಾರಾಯಣ ಜೋಶಿ, ಹೊಳೆಪ್ಪ ಬಾಡಗಿ, ದಾನಪ್ಪ ಶಿರೋಳ, ಪ್ರಕಾಶ ಚನ್ನಾಳ ಸೇರಿದಂತೆ ಹಲವರು ಇದ್ದರು.