ಮಹಾಲಿಂಗಪುರ: ಭಾರಿ ಕುತೂಹಲ ಕೆರಳಿಸಿರುವ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ನಾಮಪತ್ರಗಳ ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವುದು ಆ ನಂತರ ಅಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಲಿದೆ.
2020 ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಮಹಿಳಾ ಸದಸ್ಯೆಯರ ಎಳೆದಾಟ ಪ್ರಕರಣವು ದೇಶಾದ್ಯಂತ ವೈರಲ್ ಆಗಿದ್ದರಿಂದ ಈ ಬಾರಿಯ ಚುನಾವಣೆಯು ಯಾವ ರೀತಿ ನಡೆಯಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಭಾರಿ ಬಂದೋಬಸ್ತ್ : ಕಳೆದ ಚುನಾವಣೆಯಲ್ಲಿ ನಡೆದಂತೆ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಪುರಸಭೆಯಿಂದ 200 ಮೀಟರ್ ಒಳಗಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ನಿಷೇಧಿತ್ ಪ್ರದೇಶವನ್ನಾಗಿ ಘೋಷಿಸಿದೆ. ಪುರಸಭೆಯ ಸುತ್ತಲು ಇರುವ ಸಾಧುನ ಗುಡಿ, ಚಿಮ್ಮಡ ಗಲ್ಲಿ, ಜವಳಿ ಬಜಾರ್, ಅಷ್ಟಗಿ ಚಿತ್ರ ಮಂದಿರ ಪಕ್ಕದ ರಸ್ತೆ, ಪುರಸಭೆ ಪಕ್ಕದ ರಸ್ತೆ ಸೇರಿದಂತೆ ಪುರಸಭೆಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿ ಕೇಡ್ ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಂದಾಜು 200 ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಬಂದೋಬಸ್ತ ಗೆ ನೇಮಕಗೊಳಿಸಲಾಗಿದೆ. ರಬಕವಿ-ಬನಹಟ್ಟಿ ತಹಶಿಲ್ದಾರ ಎಸ್.ಬಿ.ಇಂಗಳೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಸುವ ಅವಧಿ: ಬೆಳಿಗ್ಗೆ10 ರಿಂದ 11 ರೊಳಗೆ ಬಿಜೆಪಿಯಿಂದ ಬಸವರಾಜ ಹಿಟ್ಟಿನಮಠ, ಕಾಂಗ್ರೆಸ್ ನಿಂದ ಜಾವೇದ ಬಾಗವಾನ್ ಮತ್ತು ಯಲ್ಲನಗೌಡ ಪಾಟೀಲ್ ಸೇರಿ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಪುರಸಭೆ ಅಧ್ಯಕ್ಷ ಆಯ್ಕೆ ಚುನಾವಣೆಯು ಕ್ಲೈಮಾಕ್ಸ್ ಹಂತದಲ್ಲಿ ಮತ್ತಷ್ಟು ರೋಚಕತೆಯನ್ನು ಹೆಚ್ಚಿಸಿದೆ. ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭವಾದ ನಂತರ ನಾಮಪತ್ರಗಳ ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವುದು, ನಂತರ ಚುನಾವಣೆ ಪ್ರಕ್ರಿಯೆ ನಡೆಯಲಿದೆ.ಅಂತಿಮವಾಗಿ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಪಟ್ಟ ಯಾರ ಮಡಿಲಿಗೆ ಎಂಬ ಸ್ಪಷ್ಟ ಉತ್ತರ ಇಂದು ಮಧ್ಯಾಹ್ನ 1-30ರ ಸುಮಾರಿಗೆ ಗೊತ್ತಾಗಲಿದೆ.