ಕಲಬುರಗಿ: ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ಪ್ರೊ| ಪಿ.ಸಿ. ಮಹಲನೊಬಿಸ್ ಕೊಡುಗೆ ಅಪಾರವಾಗಿದೆ. ಈಗಿನ ವಿದ್ಯಾರ್ಥಿಗಳು ಕೂಡ ಸಂಖ್ಯಾಶಾಸ್ತ್ರದ ಕುರಿತು ಅಪಾರ ಕಳಕಳಿಯಿಂದ ಹೆಚ್ಚಿನ ಅಧ್ಯಯನ ಮಾಡುವಂತ ಹವರಾಗಬೇಕು ಎಂದು ಕೊಹಿನೂರ ವಾಣಿಜ್ಯ ಪದವಿ ಕಾಲೇಜಿನ ಆಡಳಿತಾಧಿಕಾರಿ ಪ್ರಕಾಶ ರೋಳೆ ಹೇಳಿದರು.
ನಗರದ ಸಾಯಿ ಮಂದಿರ ಸಮೀಪದಲ್ಲಿರುವ ರಾಮ-ಮಂದಿರ ಹೈಕೋರ್ಟರಿಂಗ್ ರಸ್ತೆಯಲ್ಲಿರುವ ಕೊಹಿನೂರ ವಾಣಿಜ್ಯ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಖ್ಯಾಶಾಸ್ತ್ರ ಓದಿದ ವಿದ್ಯಾರ್ಥಿಗಳು ನಾಳೆಗೆ ದೇಶಕ್ಕೆ ಉತ್ತಮ ಕೊಡುಗೆ ನೀಡುವ ಅವಕಾಶ ಪಡೆಯಲಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದ ಕಡೆಗೆ ತಮ್ಮ ಚಿತ್ತ ಹರಿಸಬೇಕು. ಅದಕ್ಕೆ ಶಿಕ್ಷಕರು ಹಾಗೂ ಪಾಲಕರು ಒತ್ತಾಸೆಯಾಗಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಅರ್ಥಶಾಸ್ತ್ರ ಉಪನ್ಯಾಸಕ ಹಣಮಂತರಾವ ಬಿ. ಪಾಟೀಲ, ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ತಮ್ಮದೇ ಆದ ಅದ್ವಿತೀಯ ಕೊಡುಗೆ ನೀಡುವ ಮೂಲಕ ಪ್ರೊ| ಪಿ.ಸಿ. ಮಹಲನೊಬಿಸ್ ಅವರು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ. ಮಹಲನೊಬಿಸ್ ಅವರು ಸಂಖ್ಯಾಶಾಸ್ತ್ರವಲ್ಲದೆ, ಗಣಿತಶಾಸ್ತ್ರ, ವಿಜ್ಞಾನಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ.
ದ್ವಿತೀಯ ಪಂಚ ವಾರ್ಷಿಕ ಯೋಜನೆಗೆ ಸೂಕ್ತ ಮಾರ್ಗದರ್ಶನ ನೀಡಿ ಯಶಸ್ವಿಗೊಳಿಸಿದ್ದಾರೆ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಸೇವಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಅಂಕಿ-ಅಂಶ ಸಂಗ್ರಹಿಸಿ ಆರ್ಥಿಕ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ ಎಂದು ಹೇಳಿದರು.
ಮಹಲನೊಬಿಸ್ ಅವರಿಗೆ ಪದ್ಮ ವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿವೆ. ಅವರು ರಾಷ್ಟ್ರಕ್ಕೆ ನೀಡಿರುವ ಅಮೂಲ್ಯವಾದ ಕೊಡುಗೆ ಪರಿಗಣಿಸಿ ಭಾರತ ಸರ್ಕಾರ ಅವರ ಜನ್ಮದಿನವಾದ ಜೂನ್ 29ನ್ನು ಪ್ರತಿವರ್ಷ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನಾಗಿ 2006ರಿಂದ ಆಚರಿಸಲು ಪ್ರಾರಂಭಿಸಿದೆ ಎಂದು ಹೇಳಿದರು.
ಆಡಳಿತ ಮಂಡಳಿ ಸದಸ್ಯರಾದ ಪವನ ಗುತ್ತೇದಾರ, ಉಪನ್ಯಾಸಕರಾದ ಅರುಣಕುಮಾರ ರಾಠೊಡ, ಅರುಣಕುಮಾರ ಚವ್ಹಾಣ, ವಿಕ್ರಮ ನವಸೇನ, ಮುರುಗೇಶ, ಶಿಲ್ಪಾ ಕೆ.,ಶಿವಕುಮಾರ ಗೋಣಗಿಕರ್, ಜ್ಯೋತಿ ಇದ್ದರು.