Advertisement

ಜನರ ಬೇಡಿಕೆ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿರುವೆ: ಗೋಪಾಲಯ್ಯ

10:14 AM May 04, 2023 | Team Udayavani |

ಬೆಂಗಳೂರು: “ಮಹಾಲಕ್ಷ್ಮೀ ಲೇ ಔಟ್‌ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮೂಲ ಸೌಕರ್ಯದ ಅಭಿವೃದ್ಧಿ ಮಾಡಿದ್ದೇನೆ. ಒಬ್ಬ ಕಾರ್ಪೋ ರೆಟರ್‌ ಮಟ್ಟದಿಂದ ಶಾಸಕ, ಸಚಿವನಾಗಿರುವ ಹಿನ್ನೆಲೆ ಯಲ್ಲಿ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಅರಿತು ಅವುಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ನಾಗಿದ್ದೇನೆ. ಕ್ಷೇತ್ರದ ಜನರ ಒಡನಾಟದಲ್ಲಿದ್ದೇನೆ. ಈ ಹಿನ್ನೆಲೆಯಲ್ಲಿ ಈ ಬಾರಿಯು ಕ್ಷೇತ್ರದ ಜನತೆ ಕೈ ಹಿಡಿಯುವ ಸಂಪೂರ್ಣ ನಂಬಿಕೆಯಿದೆ ಎಂಬುದು’ ಮಹಾಲಕ್ಷ್ಮೀ ಲೇ ಔಟ್‌ನ ಬಿಜೆಪಿ ಅಭ್ಯರ್ಥಿ, ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ವಿಶ್ವಾಸದ ನುಡಿಗಳು. “ಉದಯವಾಣಿ’ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Advertisement

ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದೀರಿ?

ನಾನು ಕ್ಷೇತ್ರದಲ್ಲಿ ಬಹಳ ಹಿಂದಿನಿಂದ ಜನಸೇವೆ ಮಾಡಿಕೊಂಡು ಬಂದಿದ್ದೇನೆ. ಈ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತಿದ್ದೇನೆ. ಹಾಗೆಯೇ ಜನರ ಭಾವನೆ, ಬೇಡಿಕೆ, ಕ್ಷೇತ್ರದ ಸಮಸ್ಯೆಗಳನ್ನು ತಿಳಿದು, ಸ್ಪಂದಿಸಿದ್ದೇನೆ. ಇದರ ಜತೆಗೆ ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರ ಸಮರ್ಥ ನಾಯಕತ್ವವಿದೆ. ಇದರ ಪರಿಣಾಮವಾಗಿ ಈ ಬಾರಿ ದಾಖಲೆಯ ಮತಗಳಿಂದ ಗೆಲ್ಲುತ್ತೇನೆ.

ನಿಮ್ಮನ್ನು ‌ ಜನ ಏಕೆ ಚುನಾಯಿಸಬೇಕು?

ನಾನು ಕ್ಷೇತ್ರದಲ್ಲಿ ಮೂಲ ಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಕ್ಷೇತ್ರದಲ್ಲಿನ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿದ್ದೇನೆ. ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಕ್ಲಿನಿಕ್‌, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತಗೊಳಿಸಿದ್ದೇನೆ. ಹೆರಿಗೆ ಆಸ್ಪತ್ರೆ ಸ್ಥಾಪಿಸಿದ್ದೇನೆ. ಇನ್ನು ಬಹುತೇಕ ಎಲ್ಲ ಬೂತ್‌ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದೇನೆ. ಕೆಲ ಬೂತ್‌ ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಗಮನದಲ್ಲಿದ್ದು ಬಗೆಹರಿಸಲು ಪ್ರಯತ್ನಿಸುತ್ತೇನೆ. ವಿವಿಧ ಬಡಾವಣೆಗಳಿಗೆ ಅವುಗಳಿಗೆ ಪೂರಕವಾದ ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ಮಹಾಲಕ್ಷ್ಮೀ ಲೇಔಟ್‌ ನಲ್ಲಿ ಬಸವಧಾಮ ಉದ್ಯಾನ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಉದ್ಯಾನ, ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನ ನಿರ್ಮಿಸಿದ್ದೇವೆ. ಈ ಅಭಿವೃದ್ಧಿ ಕೆಲಸಗಳಿಗೆ ನನ್ನನ್ನು ಚುನಾಯಿಸಬೇಕು

Advertisement

ನೀವು ಶಾಸಕರಾಗುವ ಮೊದಲು ಈ ಕ್ಷೇತ್ರದಲ್ಲಿ ಏನು ಸಮಸ್ಯೆಗಳಿದ್ದವು?

ಈ ಕ್ಷೇತ್ರದಲ್ಲಿ ಕುಡಿಯವ ನೀರಿನ ಸಮಸ್ಯೆ ತೀವ್ರವಾಗಿತ್ತು. ಪಾರ್ಕ್‌ಗಳ ಸ್ಥಿತಿ ಉತ್ತಮವಿರಲಿಲ್ಲ. ರಸ್ತೆಗಳು ಹದಗೆಟ್ಟಿದ್ದವು. ಶಾಲೆಗಳಲ್ಲಿ ಮೂಲಭೂತ ಸೌಕರ್ಯವಿರಲಿಲ್ಲ. ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಿರಲಿಲ್ಲ. ಕ್ಷೇತ್ರದಲ್ಲಿ ಒಟ್ಟಾರೆ ಮೂಲಭೂತ ಸೌಕರ್ಯಗಳ ಕೊರತೆಯಿತ್ತು.

ನೀವು ಸದಾ ಜನರ ಕೈಗೆಟಕುವ ಶಾಸಕ ಎಂಬ ಅಭಿಪ್ರಾಯವಿದೆ?

ಹೌದು. ನಾನು ನಿರಂತರವಾಗಿ ಕ್ಷೇತ್ರದ ಜನರ ಜತೆ ಸಂಪರ್ಕದಲ್ಲಿರುತ್ತೇನೆ. ಚುನಾವಣೆ ಇರಲಿ, ಇಲ್ಲದಿರಲಿ ನಾನು ಕ್ಷೇತ್ರದ ಜನರನ್ನು ಭೇಟಿ ಆಗುತ್ತಿರುತ್ತೇನೆ. ಪ್ರತಿ ಬಡಾವಣೆಗೂ ಭೇಟಿ ನೀಡುತ್ತೇನೆ. ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ಕುಂದು ಕೊರತೆಗಳಿದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸುವ ಅವಕಾಶವನ್ನು ನನ್ನ ಕ್ಷೇತ್ರದ ಜನತೆಗೆ ನೀಡಿದ್ದೇನೆ.

ಕೋವಿಡ್‌ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದಿರಿ?

ಕೋವಿಡ್‌ ಕಾಲದಲ್ಲಿ ಕ್ಷೇತ್ರದ ಜನರ ಸಂಕಷ್ಟ ಅರಿತು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮನೆ ಮನೆಗೆ ಆಹಾರದ ಕಿಟ್‌, ಆರೋಗ್ಯ ಕಿಟ್‌, ಅಗತ್ಯವಿದ್ದವರಿಗೆ ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ, ಲಸಿಕೆ, ಮಾತ್ರೆಗಳು ಹೀಗೆ ಅವಶ್ಯಕ ಸೇವೆಗಳನ್ನು ನನ್ನ ಕರ್ತವ್ಯವೆಂದು ಭಾವಿಸಿ ನೀಡಿದ್ದೆ.

Advertisement

Udayavani is now on Telegram. Click here to join our channel and stay updated with the latest news.

Next