Advertisement

Mahakumbh; ಕುಂಭದಲ್ಲಿ ಒಂದೇ ದಿನ 1.5 ಕೋಟಿ ಜನ ಪುಣ್ಯ ಸ್ನಾನ

12:12 AM Jan 14, 2025 | Team Udayavani |

ಲಕ್ನೋ: 144 ವರ್ಷಗಳಿಗೆ ಒಮ್ಮೆ ಮಾತ್ರ ಘಟಿಸುವ ಮಹಾಕುಂಭ ಮೇಳಕ್ಕೆ ಸೋಮವಾರ ಅಧಿಕೃತ ಚಾಲನೆ ದೊರೆತಿದೆ. ಪುಷ್ಯ ಪೂರ್ಣಿಮೆಯಂದು ಕುಂಭದಲ್ಲಿ ನಡೆದ ಮೊದಲ ಶಾಹಿ ಸ್ನಾನದಲ್ಲಿ ಸಾಧುಗಳು, ಸಂತರು ಸೇರಿ 1 ಕೋಟಿ 50 ಲಕ್ಷ ಮಂದಿ ಮಿಂದಿದ್ದಾರೆ ಎಂದು ಕುಂಭಮೇಳ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Advertisement

ನಿರ್ಮೋಹಿ, ನಿರ್ವಾಣಿ, ದಿಗಂಬರ ಸೇರಿದಂತೆ 13 ಅಖಾಡಗಳ ಸಂತರು, ಅಘೋರಿಗಳು ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಹರ ಹರ ಮಹಾದೇವ್‌, ಜೈ ಭೋಲೇನಾಥ್‌, ಗಂಗಾ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ, ತ್ರಿಶೂಲ, ಕತ್ತಿಗಳನ್ನು ಝಳಪಿಸುತ್ತಾ ಸಂತರು ಮಿಂದೇಳುತ್ತಿದ್ದ ದೃಶ್ಯ ನೋಡುಗರ ಮೈ ನವಿರೇಳಿಸಿದೆ. ದೇಶ-ವಿದೇಶಗಳಿಂದ ಬಂದಿದ್ದ ಕೋಟ್ಯಂತರ ಭಕ್ತರು ಅಮೃತ ಸ್ನಾನ ಮಾಡಿ ಸಾರ್ಥಕ ಭಾವ ವ್ಯಕ್ತ ಪಡಿಸಿದ್ದಾರೆ.

content-img

ಮಂಗಳವಾರ ಇದಕ್ಕಿಂತಲೂ ಬಹುದೊಡ್ಡ ಶಾಹಿ ಸ್ನಾನ ನಡೆಯಲಿದೆ. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿರಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದಹೋದ 250 ಮಂದಿ ಕುಟುಂಬ ಸೇರ್ಪಡೆ: ಮಹಾಕುಂಭದಲ್ಲಿನ ಜನಸ್ತೋಮದ ನಡುವೆ ಕಳೆದು ಹೋಗಿದ್ದ 250 ಮಂದಿಯನ್ನು ಆಡಳಿತ ಮಂಡಳಿ ಮರಳಿ ಕುಟುಂಬಸ್ಥರೊಂದಿಗೆ ಒಗ್ಗೂಡಿಸಿದೆ. ತಪ್ಪಿಸಿ ಕೊಂಡವರನ್ನು ಖೋಯಾ-ಪಾಯ ಎಂಬ ಕೇಂದ್ರದಲ್ಲಿ ಕೂರಿಸಿ, ಅವರ ಕುಟುಂಬಸ್ಥರ ಹೆಸರನ್ನು ಮೈಕ್‌ನಲ್ಲಿ ಅನೌನ್ಸ್‌ ಮಾಡಿ ಕರೆಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕುಂಭಕ್ಕಾಗಿ ಐಎಂಡಿ ವಿಶೇಷ ವೆಬ್‌ಪೇಜ್‌
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕುಂಭಕ್ಕಾಗಿಯೇ ಪ್ರತ್ಯೇಕ, ವಿಶೇಷವಾದ ವೆಬ್‌ಪೇಜ್‌ ರಚಿಸಿದೆ. ಇದು ಕುಂಭ ಪ್ರದೇಶದಲ್ಲಿನ ತಾಪಮಾನ, ಚಳಿಯ ಮಟ್ಟ, ಗಾಳಿಯ ಚಲನೆ ಮತ್ತು ವೇಗ ಸೇರಿದಂತೆ ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಒದಗಿಸಲಿದೆ. ಅಯೋಧ್ಯೆ, ಲಕ್ನೋ, ಆಗ್ರಾ, ಕಾನ್ಪುರ, ವಾರಾಣಸಿಯ ಹವಾಮಾನ ಪರಿಸ್ಥಿತಿ ಬಗ್ಗೆಯೂ ಮಾಹಿತಿ ನೀಡಲಿದೆ. https://mausam.imd.gov.in/mahakumbh/ ವೆಬ್‌ಪೇಜ್‌ನಲ್ಲಿ ಮಾಹಿತಿ ಪಡೆಯಬಹುದು.

Advertisement

ಮೇರಾ ಭಾರತ್‌ ಮಹಾನ್‌: ವಿದೇಶಿ ಭಕ್ತರ ಬಣ್ಣನೆ
ಮೋಕ್ಷವನ್ನು ಅರೆಸುತ್ತಾ ಭಾರತಕ್ಕೆ ಬಂದೆ. ತ್ರಿವೇಣಿ ಸಂಗಮ ತಣ್ಣಗೆ ಕೊರೆಯುತ್ತಿದ್ದರೂ ಮಿಂದೇಳುವಾಗ ಭಕ್ತಿಯು ಹೃದಯವನ್ನು ಬೆಚ್ಚಗಿರಿಸಿತ್ತು. ಭಾರತವು ವಿಶ್ವದ ಅಧ್ಯಾತ್ಮದ ಹೃದಯ ಭಾಗ ಎಂದು ಬ್ರೆಜಿಲ್‌ನಿಂದ ಬಂದ ವಿದೇಶಿ ಭಕ್ತರೊಬ್ಬರು ಹೇಳಿದ್ದಾರೆ. ಸ್ಪೇನ್‌, ಬ್ರೆಜಿಲ್‌, ಪೋರ್ಚುಗಲ್‌ನಿಂದ ಬಂದಿದ್ದ ಭಕ್ತರ ಗುಂಪು ಕೂಡ ಶಾಹಿ ಸ್ನಾನದ ಪುಣ್ಯ ಅನುಭವ ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾದ ಭಕ್ತರೊಬ್ಬರು ಕುಂಭದಲ್ಲಿ ಭಾಗಿ ಯಾಗುವುದು ನಮ್ಮ ಅದೃಷ್ಟ ಎಂದಿದ್ದಾರೆ. ರಷ್ಯಾದ ಪ್ರವಾಸಿಗರೊಬ್ಬರು ಭಾರತದ ನಿಜವಾದ ಸಾರ ಕುಂಭದಲ್ಲಿ ಕಾಣುತ್ತಿದ್ದೇವೆ, ಮೇರಾ ಭಾರತ್‌ ಮಹಾನ್‌ ಎಂದಿದ್ದಾರೆ.

ಮಂದಿರ ಮೇಲೆ ಕಟ್ಟಿದ ಮಸೀದಿ ತೆರವಾಗಲಿ: ಅಖಾಡ ಮಹಂತ ಆಗ್ರಹ
ಮಂದಿರ ಮಸೀದಿ ವಿವಾದ ಕುಂಭಮೇಳದಲ್ಲೂ ಪ್ರತಿಧ್ವನಿಸಿದೆ. ದೇಶಾದ್ಯಂತ ಎಲ್ಲೆಲ್ಲಿ ಪುರಾತನ ದೇಗುಲಗಳನ್ನು ಮಸೀದಿಗಳಾಗಿ ಪರಿವರ್ತಿಸ ಲಾಗಿದೆಯೋ ಆ ಜಾಗಗಳೆಲ್ಲವನ್ನೂ ತೆರವು ಗೊಳಿಸಬೇಕು ಎಂದು ಅಖೀಲ ಭಾರತೀಯ ಅಖಾಡ ಪರಿಷತ್‌ನ ಮಹಂತರಾದ ರವೀಂದ್ರ ಪುರಿ ಆಗ್ರಹಿಸಿದ್ದಾರೆ. ಇದೇ ವೇಳೆ ಮಹಾ ಕುಂಭಕ್ಕೆ ಮುಸಲ್ಮಾನರು ಭೇಟಿ ನೀಡಬಾರದು ಎಂಬ ಯಾವ ನಿರ್ಬಂಧವೂ ಇಲ್ಲ ಎಂದೂ ಹೇಳಿದ್ದಾರೆ. ದೇಶಾದ್ಯಂತ ಶೇ.80ರಷ್ಟು ಮಸೀದಿಗಳನ್ನು ದೇಗುಲಗಳ ಮೇಲೆ ನಿರ್ಮಿಸಿರುವುದು ಕಾಣಬಹುದಾಗಿದೆ. ಎಲ್ಲೆಲ್ಲಿ ದೇಗುಲಗಳ ಮೇಲೆ ಮಸೀದಿ ನಿರ್ಮಿಸಲಾಗಿದೆಯೋ, ಆ ಜಾಗಗಳನ್ನು ತೆರವು ಗೊಳಿಸಿ ಎಂದು ಈ ಹಿಂದೆಯೂ ಮುಸ್ಲಿ ಂ ಸಮುದಾಯಕ್ಕೆ ಮನವಿ ಮಾಡಿದ್ದೇವೆ. ಈಗ 2025ರ ಕುಂಭದಲ್ಲೂ ಕೋರುತ್ತಿದ್ದೇವೆ ಎಂದು ಪುರಿ ಹೇಳಿದ್ದಾರೆ. ಕುಂಭದಲ್ಲಿ ಭಾಗಿಯಾಗುವ ಹಿಂದೂ ಸಂತರ 13 ಅಖಾಡಗಳಿಗೆಲ್ಲ ಅಖೀಲ ಭಾರತೀಯ ಅಖಾಡ ಪರಿಷತ್‌ ಮಾತೃ ಸಂಸ್ಥೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.