Advertisement

ಮಹಾಕಾವ್ಯದಲ್ಲಿ ಮೂರು ಸಂಸ್ಕೃತಿ ಅನಾವರಣ

10:00 AM Oct 21, 2021 | Team Udayavani |

ಕಲಬುರಗಿ: ಮಹರ್ಷಿ ವಾಲ್ಮೀಕಿಯ “ರಾಮಾಯಣ’ ಮಹಾಕಾವ್ಯ ಮೂರು ಸಂಸ್ಕೃತಿಗಳ ಅನಾವರಣ ಒಳಗೊಂಡಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ| ರಂಗರಾಜ ವನದುರ್ಗ ಹೇಳಿದರು.

Advertisement

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಕವಿ ವಾಲ್ಮೀಕಿ ರಚಿಸಿರುವ “ರಾಮಾಯಣ’ ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ನಿಲ್ಲುತ್ತದೆ. ಈ ಮಹಾಕಾವ್ಯದಲ್ಲಿ ಅಯೋಧ್ಯೆ ಮೂಲಕ ನಾಡ ಸಂಸ್ಕೃತಿ, ಕಿಷ್ಕಿಂದೆ ಮೂಲಕ ಕಾಡಿನ ಸಂಸ್ಕೃತಿ ಹಾಗೂ ಲಂಕೆ ಮೂಲಕ ದ್ವೀಪ ಸಂಸ್ಕೃತಿ ತೋರಿಸಿದ್ದಾರೆ ಎಂದರು.

ಕಾಡಿನಿಂದ ನಾಡಿಗೆ ನಡೆದ ಪಯಣವೇ ವಾಲ್ಮೀಕಿ ವಿಶೇಷತೆ. ಇವರ ಬೆನ್ನ ಹಿಂದಿನ ಬದುಕು ಕಾಡಾದರೆ, ಕಣ್ಣಮುಂದಿನ ಬೆಳಕು ನಾಡಾಗಿದೆ. ನಾಡು ಮೆಚ್ಚುವಂತೆ ನುಡಿದ ಮಹಾಕಾವ್ಯ ವಾಲ್ಮೀಕಿ ರಚಿತ ರಾಮಾಯಣವಾಗಿದೆ. ರಾಮನ ಮೂಲಕ ನಾಡನ್ನು, ಹನುಮನ ಮೂಲಕ ಕಾಡನ್ನು, ರಾವಣನ ಮೂಲಕ ಲಂಕೆ ನೋಡಲು ಸಂದೇಶ ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ದಯಾನಂದ ಅಗಸರ ಮಾತನಾಡಿ, ಮಹಾ ಋಷಿ ವಾಲ್ಮೀಕಿ ವಿಶ್ವದ ಅಗ್ರಗಣ್ಯ ದಾರ್ಶನಿಕರು ಹಾಗೂ ಮಹಾಕವಿಗಳಲ್ಲಿ ಒಬ್ಬರಾಗಿದ್ದಾರೆ. ವಾಲ್ಮೀಕಿ ರಚಿಸಿದ “ರಾಮಾಯಣ’ ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ ಎಂದರು.

Advertisement

ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನಾ ಪೀಠದ ನಿರ್ದೇಶಕ ಡಾ| ನಿಂಗಣ್ಣ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಡಿಕೇಟ್‌ ಸದಸ್ಯ ಡಾ| ಸಂಪತ್‌ಕುಮಾರ ಲೋಯಾ, ವಿದ್ಯಾವಿಷಯಕ ಪರಿಷತ್‌ ಸದಸ್ಯ ರಾಜೇಂದ್ರ ಕಗ್ಗನಮಡಿ, ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಪ್ರೊ| ಸೋನಾರ ನಂದಪ್ಪ, ವಿತ್ತಾ ಧಿಕಾರಿ ಪ್ರೊ| ಬಿ.ವಿಜಯ, ಪ್ರದೇಶ ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಶರಣು ಸುಬೇದಾರ, ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮಹಾನಪ್ಪ ನಾಯಕ ದೊರೆ, ನಂದಕುಮಾರ ಪಾಟೀಲ, ಪ್ರೊ| ಬಸವರಾಜ ಸಣ್ಣಕ್ಕಿ, ಪ್ರೊ| ಕೆ.ಲಿಂಗಪ್ಪ, ಪ್ರೊ| ಎಸ್‌.ಎಂ.ಮೂಲಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next