ಬಹುಜನ ಸಮಾಜ ಪಾರ್ಟಿಯ ಪರಮೋಚ್ಚ ನಾಯಕಿ ಮಾಯಾವತಿಯ ಅನಿರೀಕ್ಷಿತ ನಡೆಗಳು 2019ರ ಮಹಾಚುನಾವಣೆಗೆ ಬಿಜೆಪಿ ವಿರುದ್ಧ ವಿಪಕ್ಷಗಳು ರಚಿಸಲುದ್ದೇಶಿಸಿರುವ ಮಹಾಘಟಬಂಧನ್ ಅನ್ನು ಹಳಿತಪ್ಪಿಸುವ ಸಾಧ್ಯತೆಗಳು ಗೋಚರಿಸಿವೆ. ಇತ್ತೀಚೆಗಷ್ಟೇ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಬೇರ್ಪಟ್ಟು ಸ್ವಂತ ಪಕ್ಷ ಸ್ಥಾಪಿಸಿಕೊಂಡಿರುವ ಅಜಿತ್ ಜೋಗಿ ಜತೆ ಮೈತ್ರಿ ಮಾಡಿಕೊಂಡು ಘಟಬಂಧನ್‌ಗೆ ಮೊದಲ ಆಘಾತ ನೀಡಿದ್ದ ಮಾಯಾವತಿ ಇದೀಗ ಮಧ್ಯ ಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸುವುದರೊಂದಿಗೆ ವಿಪಕ್ಷಗಳ ಮೈತ್ರಿಕೂಟದ ಎದುರು ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದ್ದಾರೆ.
ಹಾಗೆಂದು ಇದು ಮಾಯಾವತಿ ಕೈಗೊಂಡಿರುವ ದಿಢೀರ್ ನಿರ್ಧಾರವಂತೂ ಅಲ್ಲ. ಕೆಲ ದಿನಗಳ ಹಿಂದೆಯಷ್ಟೇ ಅವರು ಗೌರವಾರ್ಹ ಸ್ಥಾನಗಳು ಸಿಗದಿದ್ದರೆ ಘಟಬಂಧನ್ ಸೇರಿಕೊಳ್ಳುವುದಿಲ್ಲ ಎಂದು ಹೇಳಿದಾಗಲೇ ರಾಜಕೀಯದ ಒಳಸುಳಿಗಳನ್ನು ಬಲ್ಲವರಿಗೆ ಮಾಯಾವತಿ ಯಾವ ದಾಳವನ್ನು ಉರುಳಿಸುತ್ತಿದ್ದಾರೆ ಎನ್ನುವುದು ಅರ್ಥವಾಗಿತ್ತು. ಇಂದಿನ ನಿರ್ಧಾರದಲ್ಲಿ ಮಾಯಾವತಿ ತನ್ನ ಮುಂದಿನ ನಡೆಯೇನೆಂದು ಸ್ಪಷ್ಟಪಡಿಸಿದ್ದಾರಷ್ಟೆ.
ಮಹಾಘಟಬಂಧನ್ ಸೇರಿ ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕಿಂತಲೂ ಪ್ರಾದೇಶಿಕ ಪಕ್ಷಗಳ ಜತೆಗೆ ಪ್ರಾದೇಶಿಕ ನೆಲೆಯಲ್ಲೇ ಮೈತ್ರಿ ಮಾಡಿಕೊಂಡರೆ ಹೆಚ್ಚು ಲಾಭ ಇದೆ ಎನ್ನುವುದನ್ನು ಮಾಯಾವತಿ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿಯೇ ಕರ್ನಾಟಕದಲ್ಲಿ ಅವರು ದೇವೇಗೌಡರ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡದ್ದು. ಈ ನಡೆಯಿಂದ ಅವರಿಗೆ ಲಾಭವಾಗಿದೆ. ಕರ್ನಾಟಕದಲ್ಲಿ ಕೆಲವೇ ಕ್ಷೇತ್ರಗಳಿಗಷ್ಟೇ ಅವರ ಪಕ್ಷ ಸೀಮಿತವಾಗಿದ್ದರೂ ಮಂತ್ರಿಮಂಡಲದಲ್ಲಿ ಒಂದು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಅವರು ಸಫಲರಾಗಿದ್ದಾರೆ.
ದಕ್ಷಿಣ ಭಾರತಕ್ಕೆ ಸಂಬಂಧಪಟ್ಟಂತೆ ಮಾಯಾವತಿ ನಿರ್ಧಾರದಿಂದ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಹಿಂದಿ ವಲಯ ಎಂದೇ ಗುರುತಿಸಲ್ಪಡುವ ಉತ್ತರ ಪ್ರದೇಶ, ಮಧ್ಯ ಪ್ರದೇಶ,ಬಿಹಾರ ಮತ್ತು ರಾಜಸ್ಥಾನದ ಫಲಿತಾಂಶದಲ್ಲಿ ನಿರ್ಣಾಯಕವಾಗಲಿದೆ. ಈ ರಾಜ್ಯಗಳಲ್ಲಿ ವಿಪಕ್ಷ ಪಾಳಯದಲ್ಲಿ ಕಾಂಗ್ರೆಸ್ ಹೊರತುಪಡಿಸಿದರೆ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲ ಇನ್ನೊಂದು ಪಕ್ಷವಿದ್ದರೆ ಅದು ಬಿಎಸ್‌ಪಿ ಮಾತ್ರ. ಇದು ಗೊತ್ತಿದ್ದೇ ಮಾಯಾವತಿ ಚೌಕಾಶಿಗಿಳಿದಿದ್ದಾರೆ. 2003ರಿಂದೀಚೆಗೆ ಮಧ್ಯ ಪ್ರದೇಶ,ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಎಸ್‌ಪಿಯ ಒಟ್ಟು ಮತಗಳಿಕೆ ಬಿಜೆಪಿಯ ಮತಗಳಿಕೆಗಿಂತ ಹೆಚ್ಚು ಇದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡೇ ಕಾಂಗ್ರೆಸ್ ಈ ಸಲ ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಉತ್ಸುಕತೆಯನ್ನು ತೋರಿಸಿತ್ತು. ಆದರೆ ಮಾಯಾವತಿ ಆರೋಪಿಸುತ್ತಿರುವಂತೆ ಕಾಂಗ್ರೆಸ್‌ನೊಳಗೆ ಕೆಲವು ನಾಯಕರಿಗೆ ಈ ಮೈತ್ರಿ ಇಷ್ಟವಿರಲಿಲ್ಲ. ಅವರ ಹೆಸರುಗಳನ್ನೂ ಮಾಯಾವತಿ ಬಹಿರಂಗಪಡಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆಯ ಆಘಾತದಿಂದ ಹೊರಬರುವ ಮೊದಲೇ 2016ರಲ್ಲಿ ನಡೆದ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ ನೆಲಕಚ್ಚಿರುವ ಬಿಎಸ್‌ಪಿಗೆ ಮುಂದಿನ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿರುವುದರ ಜತೆಗೆ ಮಾಯಾವತಿಗೂ ತನ್ನ ದಲಿತ ಉದ್ಧಾರಕಿ ಎಂಬ ಅಭಿದಾನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಚಂದ್ರಶೇಖರ್ ಆಜಾದ್, ಜಿಗ್ನೇಶ್ ಮೇವಾನಿಯಂಥ ದಲಿತ ನಾಯಕರತ್ತ ದಲಿತರು ಈಗ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಯುವಕರಿಗೆ ಅವರು ಇನ್ನಿಲ್ಲದಂತೆ ಮೋಡಿ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಇನ್ನೊಂದು ಸೋಲು ತನ್ನನ್ನು ಸಂಪೂರ್ಣ ಮೂಲೆಗುಂಪು ಮಾಡಲಿದೆ ಎಂದು ಮಾಯಾವತಿಗೆ ಅರಿವಾಗಿದೆ. ಹೀಗಾಗಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಿಂತ ಮುಖ್ಯವಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದಾರೆ.
ಮಾಯಾವತಿಯ ಈ ನಡೆಯಿಂದ ಹೆಚ್ಚು ಖುಷಿಯಾಗಿರುವುದು ಬಿಜೆಪಿಗೆ. ಕನಿಷ್ಠ ಮೂರು ರಾಜ್ಯಗಳಲ್ಲಿ ಇದ್ದ ದೊಡ್ಡದೊಂದು ಭಾರವನ್ನು ಕಳಚಿಕೊಂಡ ನಿರಾಳತೆಯಲ್ಲಿ ಆ ಪಕ್ಷವಿದೆ. ಉತ್ತರ ಪ್ರದೇಶದ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಕೂಟ ಬಿಜೆಪಿಯನ್ನು ಮಣ್ಣುಮುಕ್ಕಿಸಿತ್ತು. ಉಪಚುನಾವಣೆಗಳು ರಾಷ್ಟ್ರ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎನ್ನುವುದು ನಿಜವಾಗಿದ್ದರೂ ವಿಪಕ್ಷಗಳೆಲ್ಲ ಒಟ್ಟಾದರೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿತ್ತು. ಈ ಫಲಿತಾಂಶದ ಬಳಿಕವೇ ಮಹಾಘಟಬಂಧನ್ ಕುರಿತಾದ ಚಟುವಟಿಕೆಗಳು ತೀವ್ರಗೊಂಡದ್ದು. ಕರ್ನಾಟಕದಲ್ಲಿ ನೂತನ ಸರಕಾರದ ಪದಗ್ರಹಣ ಮಹಾಘಟಬಂಧನ್ ನಾಯಕರ ಸಮ್ಮಿಲನಕ್ಕೂ ವೇದಿಕೆಯಾಯಿಯತು. ಇಲ್ಲಿ ಸಾರಿದ ಒಗ್ಗಟ್ಟಿನ ಘೋಷ ಇಷ್ಟು ಬೇಗ ಕರಗಿ ಹೋಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದೀಗ ಮಹಾಮೈತ್ರಿಗೆ ಆರಂಭದಲ್ಲೇ ಅಪಸ್ವರ ಬಂದಿರುವುದರಿಂದ ಕಾಂಗ್ರೆಸ್ ಹಾಗೂ ಇನ್ನುಳಿದ ಪಕ್ಷಗಳು ತಮ್ಮ ರಣತಂತ್ರವನ್ನು ಬದಲಾಯಿಸುವ ಅಗತ್ಯವಿದೆ.