ಪಟ್ನಾ : ಬಿಹಾರದ ಮಹಾ ಘಟಬಂಧನ (ಮಹಾ ಮೈತ್ರಿಕೂಟ) ಭಾರೀ ಹಗ್ಗಜಗ್ಗಾಟದ ಬಳಿಕ ಕೊನೆಗೂ ರಾಜ್ಯದ 40 ಲೋಕಸಭಾ ಸೀಟುಗಳ ಹಂಚಿಕೆಯನ್ನು ಪ್ರಕಟಿಸಿದೆ.
ಸೀಟು ಹಂಚಿಕೆ ಸೂತ್ರದ ಪ್ರಕಾರ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆ ಡಿಗೆ 20 ಸೀಟುಗಳ ಸಿಕ್ಕಿವೆ. ಇವುಗಳಲ್ಲಿ ಅದು ಒಂದನ್ನು ಕಟ್ಟಾ ಎಡ ಪಕ್ಷಕ್ಕೆ (CPI(ML) ಕೊಟ್ಟಿದೆ.
ಕಾಂಗ್ರೆಸ್‌ಗೆ 9 ಸೀಟುಗಳು ಸಿಕ್ಕಿವೆ. ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿಗೆ ಐದು ಸೀಟುಗಳು ದೊರಕಿವೆ. ಜೀತನ್ ರಾಮ್ ಮಾಂಜಿ ಅವರ ಎಚ್ ಎ ಎಂ ಪಕ್ಷಕ್ಕೆ ಮತ್ತು ಮುಕೇಶ್ ಸಾಹಿನಿ ಅವರ ವಿಐಪಿ ಪಕ್ಷಕ್ಕೆ ತಲಾ ಮೂರು ಸೀಟುಗಳು ಪ್ರಾಪ್ತವಾಗಿವೆ.
ಲಾಲು ಪುತ್ರ ತೇಜಸ್ವಿ ಯಾದವ್ ಅವರು ಇಂದು ಶುಕ್ರವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದರು. ಯಾವುದೇ ಹಿರಿಯ ಕಾಂಗ್ರೆಸ್ ನಾಯಕರು ಸುದ್ದಿ ಗೋಷ್ಠಿಯಲ್ಲಿ ಹಾಜರಿಲ್ಲದಿದ್ದುದು ಆ ಪಕ್ಷದ ಅಸಮಾಧಾನವನ್ನು ಸಾರಿ ಹೇಳುತ್ತಿತ್ತು.
ಅಬ್ದುಲ್ ಬಾರಿ ಸಿದ್ದಿಕಿ ಅವರು ದರ್ಭಾಂಗದಿಂದ ಸ್ಪರ್ಧಿಸಲಿರುವುದರಿಂದ ಈಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಹಾಲಿ ಸಂಸದ ಕೀರ್ತಿ ಆಜಾದ್ ಗೆ ಈಗ ಬರಿಗೈ ಭಾಗ್ಯ ಒದಗಿದೆ. ಇದು ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಭಾರೀ ಇರಿಸು ಮುರಿಸು ಉಂಟು ಮಾಡಿದೆ. ರಾಹುಲ್ ಉಪಸ್ಥಿತಿಯಲ್ಲೇ ಈಚೆಗೆ ಕೀರ್ತಿ ಆಜಾದ್ ಕಾಂಗ್ರೆಸ್ ಸೇರಿದ್ದರು.
ಬೇಗುಸರಾಯ್ ಕ್ಷೇತ್ರದಿಂದ ತನ್ವೀರ್ ಹುಸೇನ್ ಅವರನ್ನು ಆರ್ ಜೆ ಡಿ ಕಣಕ್ಕೆ ಇಳಿಸುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಇದರ ಪರಿಣಾಮವಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿರುದ್ದ ಸ್ಪರ್ಧಿಸಲಿದ್ದ ಸಿಪಿಐ ನ ಕನ್ಹಯ್ಯ ಕುಮಾರ್ ಗೆ ಆಘಾತವಾಗಿದೆ.