ಮಹದೇವಪುರ: ನಗರ ಯೋಜನಾ ನಕ್ಷೆ ಮಂಜೂರಾತಿ ಅಧಿಕಾರಿಗಳ ನಿರ್ಲಕ್ಷÂ ಹಾಗೂ ಬಿಲ್ಡರ್‌ಗಳ ದುರಾಸೆಗೆ ಸಾವಿರಾರು ಜನರು ರಸ್ತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ದೊಡ್ಡನಕ್ಕುಂದಿ ವಾರ್ಡ್‌ನ ತೂಬರಹಳ್ಳಿ ಸಮೀಪ ಮೂರು ವರ್ಷಗಳ ಹಿಂದೆ ಬಹು ಮಹಡಿಗಳು ತಲೆ ಎತ್ತಿದ್ದು, ಸಾವಿರಾರು ಗ್ರಾಹಕರು ಮನೆಗಳನ್ನು ಖರೀದಿಸಿ ವಾಸಿಸುತ್ತಿದ್ದಾರೆ.
ಆದರೆ, ಅಪಾರ್ಟ್‌ಮೆಂಟ್‌ಗೆ ತೆರಳುವ ರಸ್ತೆ ತೂಬರಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬುವವರ ಜಮೀನು ಪಕ್ಕದಲ್ಲೇ ಹಾದು ಹೋಗುತ್ತಿದ್ದು, ಗ್ರಾಮ ನಕ್ಷೆಯಲ್ಲಿ ಆ ರಸ್ತೆಯನ್ನು ಸುಮಾರು 8 ಅಡಿಯೆಂದು ನಮೂದಿಸಿದೆ. ಆದರೆ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಮಾಡಿರುವ ಬಿಲ್ಡರ್‌ಗಳು 40 ಅಡಿ ರಸ್ತೆ ಇರುವುದಾಗಿ ನಕಲಿ ನಕ್ಷೆ ತೋರಿಸಿ ವಂಚಿಸಿದ್ದಾರೆಂದು ಗ್ರಾಹಕರ ಆರೋಪಿಸಿದ್ದಾರೆ.
ನಗರ ಯೋಜನಾ ನಕ್ಷೆ ಮಂಜೂರಾತಿ ಅಧಿಕಾರಿಗಳು ದಾಖಲಾತಿಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ನಕ್ಷೆ ಮಂಜೂರಾತಿ ನೀಡಿದ್ದಾರೆ. ಇದ್ದರಿಂದ ಜನ ಜೀವನ ದುಸ್ತರವಾಗಿದೆ ಎಂದು ಬಹುಮಹಡಿ ಕಟ್ಟಡದ ವಾಸಿಗಳು ದೂರಿದರು. ಫ್ಲ್ಯಾಟ್ ಮಾರುವುದಕ್ಕೆ ಬಿಲ್ಡರ್‌ಗಳು ರಸ್ತೆ ನಿರ್ಮಾಣ ಮಾಡಿದ್ದರು. ರಸ್ತೆ ಪಕ್ಕದಲ್ಲಿರುವ ಭೂ ಮಾಲೀಕರು ರಸ್ತೆ ಹಾದು ಹೋಗಿರುವ ಜಮೀನು ತಮ್ಮಗೆ ಸೇರಿದ್ದೆಂದು 8 ಅಡಿ ಇದ್ದ ರಸ್ತೆಯನ್ನು 6 ಅಡಿಗೆ ಮೊಟಕುಗೊಳಿಸಿ ರಸ್ತೆಯಲ್ಲಿ ತಂತಿಬೇಲಿ ಅಳವಡಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಇದರಿಂದ ಆಂಬ್ಯುಲೆನ್ಸ್, ಶಾಲಾ ವಾಹನ, ನೀರಿನ ಟ್ಯಾಂಕರ್ ಹಾಗೂ ವಾಹನಗಳು ಸಂಚರಿಸಲು ಸಾಧ್ಯವಾಗದೆ ಅಪಾರ್ಟ್‌ಮೆಂಟ್ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸ್ಥಳೀಯರು ಪಾಲಿಕೆ ಸದಸ್ಯೆ ಶ್ವೇತಾ ವಿಜಯ್‌ಕುಮಾರ್ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಾಚಲಪತಿ ಮತ್ತು ತಹಶೀಲ್ದಾರ್ ತೇಜಸ್‌ಕುಮಾರ್ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನು ಮಾಲೀಕರ ಬಳಿ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ರಸ್ತೆಗೆ ಅಳವಡಿಸಿರುವ ಬೇಲಿಯನು ತೆರವು ಮಾಡುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಒಪ್ಪದ ಭೂ ಮಾಲೀಕರು ತೆರವುಗೊಳಿಸಲು ಅನುವು ಮಾಡಿಕೊಡಲಿಲ್ಲ. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲನ್ನು ಆಲಿಸಿ ನಕ್ಷೆಯಲ್ಲಿರುವಂತೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಹು ಮಹಡಿ ಕಟ್ಟಡ ನಿವಾಸಿಗಳು ಯಾವುದೇ ಕಾರಣಕ್ಕೂ ಧೃತಿಗೆಡಬಾ ರದು ಕೂಡಲೇ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವು ದಾಗಿ ಭರವಸೆ ನೀಡಿದರು.