Advertisement

ಮಹದಾಯಿ ವಿವಾದ: ಬೀದಿ,ಬಂದ್‌, ಬಂಧನ

06:00 AM Dec 28, 2017 | Team Udayavani |

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್‌ ರೈತರನ್ನು ಛೂ ಬಿಟ್ಟು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ತಲೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Advertisement

ಬುಧವಾರ ಬೆಳಗ್ಗೆ ಆರ್‌.ಅಶೋಕ್‌ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು ಮತ್ತು ಕೆಲವು ರೈತರು, ಕಾಂಗ್ರೆಸ್‌ ಸರ್ಕಾರದ ವಿರುದಟಛಿ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಕಾಂಗ್ರೆಸ್‌ ಈ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಆರ್‌.ಅಶೋಕ್‌ ಮಾತ ನಾಡಿ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ರೈತರನ್ನು ಎತ್ತಿ ಕಟ್ಟಿ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಸೂಚಿಸಿದೆ. ಅಲ್ಲಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಬಂದು ಭೇಟಿ ಮಾಡಲು ಯಾವುದೇ ಅನುಮತಿ ಬೇಕಿಲ್ಲ. ರಾಜ್ಯದಲ್ಲಿನ ಗೂಂಡಾ ಸರ್ಕಾರ
ತೊಲಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ವಿರುದಟಛಿ ವಾಗ್ಧಾಳಿ: ಬಿಜೆಪಿ ಕಚೇರಿ ಎದುರು ಅನುಮತಿ ಇಲ್ಲದಿದ್ದರೂ ಪ್ರತಿಭಟನೆಗೆ ಅವಕಾಶ ನೀಡಿದ
ಪೋಲಿಸರು, ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. 

ನೀವೇನು ಕಾಂಗ್ರೆಸ್‌ ಪಕ್ಷದ ಏಜೆಂಟರೇ? ನಮ್ಮನ್ನು ಯಾವ ಕಾನೂನಿನಡಿ ಬಂಧಿಸುತ್ತೀರಿ? ನಮ್ಮನ್ನು ಈಗ ಬಂಧಿಸಿದರೆ
ಮುಂದೆ ನಿಮಗೆ ತೊಂದರೆಯಾಗಲಿದೆ ಎಂದು ಪೊಲಿಸರಿಗೆ ಎಚ್ಚರಿಕೆ ನೀಡಿದರು.

Advertisement

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಯಡಿಯೂರಪ್ಪ ಮಹದಾಯಿ ಯೋಜನೆಗೆ 100 ಕೋಟಿ ರೂ.ನೀಡಿದ್ದರು. ಕಾಂಗ್ರೆಸ್‌ ಏನೂ ಮಾಡಿಲ್ಲ. ಅಲ್ಲದೆ, ಗೋವಾದಲ್ಲಿ
ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಮನವೊಲಿಸುವ ಪ್ರಯತ್ನ ಮಾಡಿಲ್ಲ. ಈ ವಿಷಯದಲ್ಲಿಯೂ ಕಾಂಗ್ರೆಸ್‌ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಅಶೋಕ್‌ಗೆ ಗಾಯ: ಅನುಮತಿ ಇಲ್ಲದೆ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿದ್ದರಿಂದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು. ಈ ವೇಳೆ ಆರ್‌.ಅಶೋಕ್‌ ಅವರು ಬಸ್‌ನಿಂದ ಹೊರಗೆ ತಲೆ
ಹಾಕಿದಾಗ ಅಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಬಲವಂತವಾಗಿ ಬಸ್‌ ಬಾಗಿಲು ಹಾಕಿದ್ದು, ಅದು ತಾಗಿ ಅಶೋಕ್‌ ತಲೆಗೆ ಗಾಯವಾಯಿತು.

ಕೂಡಲೇ ಅವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಶೋಕ್‌ ತಲೆಗೆ ಬ್ಯಾಂಡೇಜ್‌ ಹಾಕಲಾಗಿದ್ದು, ಎರಡು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ.

ರೈತರ ಪಾದಯಾತ್ರೆ
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ರೈತ ಹೋರಾಟಗಾರರು ನಗರದ ಬಿಜೆಪಿ ಕಚೇರಿ ಎದುರು ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಬುಧವಾರ ಅಂತ್ಯಗೊಂಡಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾವಣೆಗೊಂಡಿದೆ.

ಇಲ್ಲಿ ಹೋರಾಟ ನಿಂತರೂ, ಸಮಸ್ಯೆ ಬಗೆಹರಿಯುವ ವರೆಗೆ ನರಗುಂದ, ನವಲುಗುಂದದಲ್ಲಿ ಹೋರಾಟ ಮುಂದುವರಿಸಲು
ರೈತರು ನಿರ್ಧರಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಜ.31ರ ಗಡುವು ನೀಡಿರುವ ರೈತರು, ಅಷ್ಟರೊಳಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ವಿವಾದ ಇತ್ಯರ್ಥ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ. ಮಲ್ಲೇಶ್ವರದಿಂದ ಹೊರಟ ಮಹದಾಯಿ ರೈತರು, ರಾಜಭವನ, ಸಿಎಂ ನಿವಾಸ, ಚುನಾವಣಾಧಿಕಾರಿಗಳ ಕಚೇರಿ, ಜೆಡಿಎಸ್‌ ಕಚೇರಿ, ಚಲನಚಿತ್ರ ವಾಣಿಜ್ಯ ಮಂಡಳಿಗಳಿಗೆ ಪಾದಯಾತ್ರೆ ಮೂಲಕ ತೆರಳಿ ತಮ್ಮ ಮನವಿ ಸಲ್ಲಿಸಿದರು. ಜತೆಗೆ ಚಿತ್ರರಂಗದ ಬೆಂಬಲವನ್ನೂ
ಕೋರಿದರು.

ಬಿಜೆಪಿ ಕಚೇರಿಯಿಂದ ರಾಜಭವನ
ಬೆಳಗ್ಗೆ 11ರ ಸುಮಾರಿಗೆ ಬಿಜೆಪಿ ಕಚೇರಿ ಮುಂಭಾಗದಿಂದ ಪಾದಯಾತ್ರೆ ಹೊರಟ ರೈತ ಸೇನಾ ಕರ್ನಾಟಕ ಕಾರ್ಯಕರ್ತರು ಶೇಷಾದ್ರಿಪುರ, ರೇಸ್‌ಕೋರ್ಸ್‌ ಮಾರ್ಗವಾಗಿ ರಾಜ ಭವನದ ಕಡೆ ಸಾಗಿದರು. ಆದರೆ ಚಾಲುಕ್ಯ ವೃತ್ತದ ಆರ್‌ಸಿ ಕಾಲೇಜು ಸಮೀಪದಲ್ಲೇ ರೈತರನ್ನು ತಡೆದ ಪೊಲೀಸರು ಕೆಲವು ರೈತ ಮುಖಂಡರನ್ನು ಮಾತ್ರ ತಮ್ಮ ವಾಹನದಲ್ಲಿ ಕರೆದೊಯ್ದರು. ಮೊದಲಿಗೆ ರೈತರಿಗೆ ರಾಜಭವನ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next