ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ ಜನರು ಸುಮಾರು 900 ದಿನಗಳಿಂದ ಅವಿರತವಾಗಿ ನಡೆಸುತ್ತಿರುವ ಹೋರಾಟದ ಕಾವು ಮತ್ತೂಮ್ಮೆ ತೀವ್ರಗೊಂಡಿದೆ. ಈ ಭಾಗದ ಜನರು ನೀರಿಗಾಗಿ ನಿರ್ಣಾಯಕ ಹೋರಾಟ ಕೈಗೊಂಡಿದ್ದರೆ ಇತ್ತ ರಾಜ್ಯದ ಮೂರು ರಾಜಕೀಯ ಪಕ್ಷಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಿರುವುದನ್ನು ನೋಡುವಾಗ ಖೇದವಾಗುತ್ತದೆ.
ಮೂರು ವರ್ಷದ ಹಿಂದೆ ತೀವ್ರಗೊಂಡು ಬಳಿಕ ತುಸು ತಣ್ಣಗಾಗಿ ಬೂದಿ ಮುಚ್ಚಿದ್ದ ಕೆಂಡದಂತಿದ್ದ ಹೋರಾಟ ಮತ್ತೆ ಭುಗಿಲೇಳುವಂತೆ ಮಾಡಿದ್ದು ಬಿಜೆಪಿ ನಾಯಕ ಯಡಿಯೂರಪ್ಪ. ಗೋವಾದ ಮುಖ್ಯಮಂತ್ರಿಯ ಮನವೊಲಿಸಿ ವಿವಾದ ವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಅವರ ಉದ್ದೇಶ ಚೆನ್ನಾಗಿದ್ದರೂ ಎಲ್ಲವೂ ಅವರಂದುಕೊಂಡಂತೆ ನಡೆಯದೇ ಹೋದದ್ದು ಅವರದ್ದು ಮಾತ್ರವಲ್ಲದೆ ಉತ್ತರ ಕರ್ನಾಟಕದ ಜನರ ದುರಾದೃಷ್ಟ. ಒಂದು ವೇಳೆ ಪಾರಿಕರ್ ಪತ್ರದಲ್ಲಿ ನೀಡಿದ ಭರವಸೆಯಂತೆ ಕನಿಷ್ಠ ಕುಡಿಯುವ ನೀರು ಹರಿಸುವ ಉದಾರತೆ ತೋರಿದ್ದರೆ ಆ ಮಟ್ಟಿಗೆ ವಿವಾದ ಬಗೆಹರಿಯುತ್ತಿತ್ತು. ಆದರೆ ಇಷ್ಟು ಸುಲಭವಾಗಿ ಅದೂ ಬಿಜೆಪಿಯಿಂದಾಗಿ ವಿವಾದ ಬಗೆಹರಿದರೆ ತನ್ನ ಮತ ಪೆಟ್ಟಿಗೆಗೆ ಹೊಡೆತ ಬೀಳುತ್ತದೆ ಎಂದು ಭಾವಿಸಿದ ಕಾಂಗ್ರೆಸ್ ಸರಕಾರ ರಾಜಕೀಯದಾಟ ಆಡಲು ಶುರು ಮಾಡಿದ ಬಳಿಕ ವಿವಾದ ಇನ್ನಷ್ಟು ಜಟಿಲವಾಗಿದೆ.
ವಿವಾದದಲ್ಲಿ ತನ್ನದೂ ಪಾಲಿರಲಿ ಎಂದು ಜೆಡಿಎಸ್ ಕೂಡ ಆಖಾಡಕ್ಕಿಳಿದಿದ್ದು ಒಟ್ಟಾರೆಯಾಗಿ ನೀರಿಗಿಂತಲೂ ರಾಜಕೀಯ ಹೋರಾಟವೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಜಲ ವಿವಾದ ಇರುವ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರ ಇದ್ದರೆ ವಿವಾದ ಅಷ್ಟು ಸುಲಭವಾಗಿ ಬಗೆಹರಿಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಂದು ಒಂದೇ ಪಕ್ಷದ ಸರಕಾರ ಇದ್ದಾಗಲೂ ವಿವಾದ ಬಗೆಹರಿದಿಲ್ಲ. ಕಾವೇರಿ, ಕೃಷ್ಣಾ, ಸೇರಿದಂತೆ ಹಲವು ಜಲ ವಿವಾದಗಳು ವರ್ಷಾನುಕಾಲ ಜೀವಂತವಾಗಿ ಉಳಿದಿವೆ. ಜಲ ವಿವಾದದಲ್ಲಿ ಕರ್ನಾಟಕದ ಪಾಡು ಬಹಳ ಶೋಚನೀಯ. ಒಂದೆಡೆ ಮಹದಾಯಿ ಇನ್ನೊಂದೆಡೆ ಕಾವೇರಿ ಹೀಗೆ ಎರಡೂ ಕಡೆಯಿಂದ ರಾಜ್ಯ ನಿರಂತರವಾಗಿ ಹೊಡೆತ ತಿನ್ನುತ್ತಾ ಇದೆ. ನ್ಯಾಯಾಧಿಕರಣಗಳ ರಚನೆಯಾಗಿದ್ದರೂ ಯಾವ ವಿವಾ ದವೂ ಬಗೆಹರಿದಿಲ್ಲ.
ಮಹದಾಯಿಗಾಗಿ ರಚನೆ ಯಾಗಿರುವ ನ್ಯಾಯಾಧಿಕರಣ ಕಳೆದ ವರ್ಷ ನೀಡಿದ ತೀರ್ಪು ಕರ್ನಾಟಕದ ಎಲ್ಲ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಹೀಗಾಗಿ ನ್ಯಾಯಾಧಿಕರ ಣದಿಂದ ಹೆಚ್ಚಿನ ಪ್ರಯೋಜನವಾದೀತು ಎಂದು ನಿರೀಕ್ಷಿಸುವಂತಿಲ್ಲ. ಮಾತುಕತೆಯಿಂದ ವಿವಾದಗಳು ಬಗೆಹರಿಯಬೇಕೆನ್ನುವುದು ಎಲ್ಲರ ಅಪೇಕ್ಷೆ. ಆದರೆ ರಾಜಕೀಯದಿಂದಾಗಿ ಇಂತಹ ವಾತಾವರಣ ಮೂಡುತ್ತಿಲ್ಲ. ಮಹದಾಯಿ ವಿಚಾರದಲ್ಲಿ ಪಾರಿಕರ್‌ಗೆ ಕುಡಿಯುವ ನೀರು ನೀಡಲು ಮನಸ್ಸಿತ್ತು. ಆದರೆ ಅಲ್ಲಿ ಅವರ ಸರಕಾರಕ್ಕೆ ಬಹುಮತವಿಲ್ಲ.
ಒಂದು ವೇಳೆ ಮಹದಾಯಿ ನೀರು ಕರ್ನಾಟಕಕ್ಕೆ ನೀಡಿದರೆ ಸರಕಾರ ಬೀಳುವ ಭೀತಿಯಿದೆ. ಹೀಗಾಗಿ ಪತ್ರ ಬರೆದ ಮರುದಿನವೇ ಅವರು ಉಲ್ಟಾ ಹೊಡೆದರು. ಅಲ್ಲಿನ ನೀರಾವರಿ ಸಚಿವರಂತೂ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿ ಯಾಗಿದೆ. ಆ ರಾಜ್ಯದ ಕಾಂಗ್ರೆಸ್ ಪಕ್ಷವೂ ನೀರು ಬಿಟ್ಟರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯಿತ್ತಿದೆ. ಇತ್ತ ನಮ್ಮಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಹಾದಾಯಿ ನೀರು ತರಬೇಕೆಂಬ ಮನಸ್ಸೇನೋ ಇದೆ. ಆದರೆ ಅದರಿಂದ ಇನ್ನೊಬ್ಬರಿಗೆ ಲಾಭವಾಗಬಾರದು ಎಂಬ ಸ್ವಾರ್ಥವೂ ಇದೆ. ಗೋವಾದ ಕಾಂಗ್ರೆಸ್ ನಾಯಕರ ಮನವೊಲಿಸುವ ಪ್ರಯತ್ನ ರಾಜ್ಯದ ಕಾಂಗ್ರೆಸ್ ನಾಯಕರು ಮಾಡಿದ್ದರೆ ಕುಡಿಯುವ ನೀರಾದರೂ ಸಿಗುತ್ತಿತ್ತು.
ಆದರೆ ಕಾಂಗ್ರೆಸ್ ಆ ಪ್ರಯತ್ನ ಮಾಡದೆ ಬಿಜೆಪಿಯನ್ನು ದೂಷಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಇನ್ನು ಉಳಿದಿರುವುದು ಪ್ರಧಾನಿ ಮಧ್ಯಸ್ಥಿಕೆ ವಹಿಸುವುದು. ಸದ್ಯಕ್ಕೆ ಕಾಂಗ್ರೆಸಿನ ಬೇಡಿಕೆಯೂ ಇದೇ ಆಗಿದೆ. ಆದರೆ ಮೋದಿಯೇಕೋ ಈ ವಿಚಾರದಲ್ಲಿ ದಿವ್ಯಮೌನ ವಹಿಸಿದ್ದಾರೆ. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಜತೆಯಾಗಿ ಬನ್ನಿ ಎಂದು ಹಿಂದೊಮ್ಮೆ ಅವರು ಹೇಳಿದ್ದರೂ ಅದಕ್ಕೆ ಕಾಲಕೂಡಿ ಬಂದಿಲ್ಲ. ಹಾಗೊಂದು ವೇಳೆ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದರೂ ತನ್ನದೇ ಪಕ್ಷದ ಅಧಿಕಾರವಿರುವ ಎರಡು ರಾಜ್ಯಗಳ ಹಿತಾಸಕ್ತಿ ಬಲಿಗೊಟ್ಟು ಅವರು ಕರ್ನಾಟಕಕ್ಕೆ ಒಳಿತು ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವೇ? ಒಂದು ವೇಳೆ ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ತಾತ್ಕಾಲಿಕ ಸಂಧಾನ ವ್ಯವಸ್ಥೆ ಮಾಡಿದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸುವುದೇ ಬುದ್ಧಿವಂತಿಕೆಯ ನಡೆ. ಸದ್ಯಕ್ಕೆ ಅದು ಮರೀಚಿಕೆಯಾಗಿರುವಂತೆ ಕಾಣಿಸುತ್ತದೆ.