Advertisement

ಪಂಚಮಸಾಲಿ 3ನೇ ಪೀಠ: ಡಾ|ಮಹಾದೇವ ಶ್ರೀಗೆ ಪಟ್ಟಾಭಿಷೇಕ

12:17 AM Feb 14, 2022 | Team Udayavani |

ಬಾಗಲಕೋಟೆ: ಬಹು ನಿರೀಕ್ಷಿತ ಹಾಗೂ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪಂಚಮಸಾಲಿ ಸಮಾಜದ 3ನೇ ಪೀಠದ ನೂತನ ಜಗದ್ಗುರುಗಳಾಗಿ ಬಬಲೇಶ್ವರ ಬ್ರಹನ್ಮಠದ ಡಾ| ಮಹಾದೇವ ಶಿವಾಚಾರ್ಯ ಸ್ವಾಮೀಜಿಗೆ ರವಿವಾರ ಪಟ್ಟಾಭಿಷೇಕ ನೆರವೇರಿಸಲಾಯಿತು.

Advertisement

ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಸ್ವಾಮೀಜಿಗಳು, ಹರಿಹರ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಸಹಿತ ನಾಡಿನ ಹಲವು ಮಠಾಧೀಶರ ನೇತೃತ್ವದಲ್ಲಿ 3ನೇ ಪೀಠದ ಪೀಠಾಧ್ಯಕ್ಷರಿಗೆ ರುದ್ರಾಕ್ಷಿ ಪೀಠ, ರುದ್ರಾಭಿಷೇಕ ನೆರವೇರಿಸಿ ಜಗದ್ಗುರುಗಳನ್ನಾಗಿ ಅಧಿಕಾರ ವಹಿಸಲಾಯಿತು.

ಆಲಗೂರಿನಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಅಷ್ಟ ದುರ್ಗಾ ಪೂಜೆ, ಪಾರ್ವತಿ ಪೂಜೆ, ಏಕಾ ದಶಿ ಮಹಾರುದ್ರ ಪೂಜೆ, ಸ್ವಸ್ತಿಪುಣ್ಯ ಆಹ್ವಾಚನ ಸಹಿತ ವಿವಿಧ ಧಾರ್ಮಿಕ ವಿಧಿಗಳು ನಡೆದವು. ರುದ್ರಾಭಿಷೇಕ ಆಸನದಲ್ಲಿ ಜಗದ್ಗುರುಗಳನ್ನು ಕೂಡಿಸಿ, ಮಂತ್ರ ಪಠಣ, ಪೂಜೆಯ ವಿಧಿ-ವಿಧಾನ ನಡೆಸಲಾಯಿತು.

ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಅಭಿನವ ಸಂಗನಬಸವ ಸ್ವಾಮೀಜಿ, ಉಪಾಧ್ಯಕ್ಷ ಬೆಂಡವಾಡದ ರೇವಣಸಿದ್ದ ಸ್ವಾಮೀಜಿ, ಸಿದ್ದಲಿಂಗ ದೇವರು ಸಹಿತ ಹಲವು ಶ್ರೀಗಳು ಪಾಲ್ಗೊಂಡಿದ್ದರು.

ಬಳಿಕ ಮಧ್ಯಾಹ್ನ ಆಲಗೂರಿನ ಬೃಹತ್‌ ವೇದಿಕೆಯಲ್ಲಿ ನೂತನ ಜಗದ್ಗುರುಗಳಿಗೆ ರುದ್ರಾಕ್ಷಿಗಳಿಂದ ಸಿದ್ಧಪಡಿಸಿದ್ದ ಪೀಠ ತೊಡಿಸಿ, ಬಹಿರಂಗವಾಗಿ ಪೀಠಾರೋಹಣ ನೆರವೇರಿಸಲಾಯಿತು. ಈ ಕಾರ್ಯಕ್ಕೆ ಸುಮಾರು 200ಕ್ಕೂ ಹೆಚ್ಚು ಸ್ವಾಮೀಜಿಗಳು, ಸಾವಿರಾರು ಭಕ್ತರು, ಪಂಚಮಸಾಲಿ ಸಮಾಜವೂ ಸಹಿತ ಹಲವು ಸಮಾಜಗಳ ಪ್ರಮುಖರು ಸಾಕ್ಷಿಯಾದರು.

Advertisement

ಇದನ್ನೂ ಓದಿ:15-18 ವರ್ಷದ ಶೇ.70 ಮಕ್ಕಳಿಗೆ ಲಸಿಕೆ; ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆ ಕುರಿತು ಸುದ್ದಿ ಹರಡಿದಾಗ ಬಹು ಚರ್ಚೆಯಾಗಿತ್ತು. ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಕೆಲವರು 3ನೇ ಪೀಠಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದು ನಿರಾಣಿ ಪೀಠ ಎಂದು ಟೀಕಿಸಿದ್ದರು.
ಆದರೆ, ರವಿವಾ ರ ನಡೆದ ಗಾಣಿಗ ಪೀಠದ ಅಭಿನವ ಜಯಬಸವ ಜಗದ್ಗುರು, ದಿಂಗಾಲೇಶ್ವರ ಸ್ವಾಮೀಜಿ, ಸುಲಫಲದ ಸಾರಂಗ ದೇಶಿಕೇಂದ್ರ ಶ್ರೀ, ನಿಡಸೋಸಿಯ ಪಂಚಮ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಹಿತ ಸುಮಾರು 200ಕ್ಕೂ ಹೆಚ್ಚು ಶ್ರೀಗಳು, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಪಿ.ಸಿ. ಗದ್ದಿಗೌಡರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್‌, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್‌, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ ಭಾಗವಹಿಸಿದ್ದರು.

ಟ್ರಸ್ಟಿಗಳ ಸಂಗಮ
3ನೇ ಪೀಠದ ನೂತನ ಜಗದ್ಗುರುಗಳ ಪೀಠಾರೋಹಣ, ಬೃಹತ್‌ ರೈತ ಮತ್ತು ಧರ್ಮ ಸಮ್ಮೇಳನದಲ್ಲಿ ಹರಿಹರ, ಕೂಡಲಸಂಗಮ ಹಾಗೂ ನೂತನ ಆಲಗೂರ ಸಹಿತ ಮೂರು ಪೀಠಗಳ ಟ್ರಸ್ಟಿಗಳು ಒಂದೇ ವೇದಿಕೆಯಡಿ ಕಾಣಿಸಿಕೊಂಡು, ಇದು ಸಮಾಜ ಒಡೆಯುವ ಕೆಲಸವಲ್ಲ. ಸಮಾಜ ಕಟ್ಟುವ ಕೆಲಸ ಎಂದು ಬಹಿರಂಗವಾಗಿ ಸಾರಿದರು. ಆಲಗೂರಿನ ಈ ಪೀಠದಿಂದ ಸಮಾಜದಲ್ಲಿ ಧರ್ಮ, ಧಾರ್ಮಿಕ ಕಾರ್ಯ ನಡೆಯಲಿವೆ ಎಂದು ಮೂರು ಪೀಠಗಳ ಟ್ರಸ್ಟಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next