ಬೆಂಗಳೂರು: ಮಹದಾಯಿ ನದಿ ನೀರಿನ ವಿವಾದದ ಸಂಬಂಧ ಸರಣಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಮಹದಾಯಿ ನದಿನೀರಿನ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವನ್ನು ಘೋಷಿಸಿಬಿಡಿ. 2 ವರ್ಷ ಹತ್ತು ತಿಂಗಳ ವರೆಗೆ ಮುಚ್ಚಿಟ್ಟು ಈಗ ಅನುಮತಿ ನೀಡಿರುವುದು ನ್ಯಾಯದ ತೀರ್ಮಾನವೇ ಇಲ್ಲವೇ ಅನ್ಯಾಯದ ಆಟವೇ ಎಂದು ವಾಗ್ಧಾಳಿ ನಡೆಸಿದ್ದಾರೆ.
ಗೋವಾ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನೀರಾವರಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಡಿಪಿಆರ್‌ಗೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳಲು ಮನವಿ ಮಾಡಿದೆ. ಗೃಹಸಚಿವ ಅಮಿತ್ ಶಾ ಅವರು ಆಶಾದಾಯಕ ಭರವಸೆ ನೀಡಿದ್ದಾರಂತೆ. ಏನಿದು ಡಬಲ್ ಗೇಮ್ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬೆಳವಣಿಗೆಯನ್ನು ಗಮನಿಸಿದ್ದಾರೆಂದು ನಂಬಿದ್ದೇನೆ. ಈ ರಾಜಕೀಯ ಜಿದ್ದಾಜಿದ್ದಿಯಲ್ಲಿ ಬಲಶಾಲಿಯಾಗಿದ್ದವರೇ ಗೆಲ್ಲುವುದು ರಾಜನೀತಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯದ ಇಪ್ಪತ್ತೆ„ದು ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೆ ಕೊಕ್ಕೆ: ಜೆಡಿಎಸ್ ಟೀಕೆ :
ಬೆಂಗಳೂರು: ಮಹದಾಯಿ ಯೋಜನೆಯ ಒಪ್ಪಿತ ಪರಿಷ್ಕೃತ ವಿಸ್ತೃತ ಯೋಜನಾ ವರದಿಯ ಮೇಲೆ ಸ್ಟೇ ತರಲು ಗೋವಾ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಲಿದೆ. ಇದರ ಜತೆಗೆ, ನಮ್ಮ ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಲವು ಸ್ಪಷ್ಟನೆ ಕೇಳಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಒಟ್ಟಿನಲ್ಲಿ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೆ ಕೊಕ್ಕೆ ಹಾಕಲಾಗುತ್ತಿದೆ ಎಂದು ಜೆಡಿಎಸ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಕ್ಷ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಗೋವಾದಲ್ಲೂ ಬಿಜೆಪಿ ಸರ್ಕಾರ. ಇವರೆಲ್ಲರಿಗೂ ಒಂದೇ ಹೈಕಮಾಂಡ್. ಹಾಗಿದ್ದೂ ಕೂಡ, ಈ ಯೋಜನೆಯನ್ನು ಅನಗತ್ಯ ವಿವಾದಕ್ಕೀಡು ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಬದುಕು ಹಸನಾಗಿಸುವ ಇಂತಹ ಯೋಜನೆ, ರಾಜ್ಯ ಬಿಜೆಪಿ ಸರ್ಕಾರದ ಪಾಲಿಗೆ ಬರೀ ರಾಜಕಾರಣದ ಟ್ರಂಪ್ ಕಾರ್ಡ್. ಅವರಿಗೆ ಎಂತಹ ಬದ್ಧತೆಯೂ ಇಲ್ಲ ಎಂದು ತಿಳಿಸಿದೆ.