Advertisement

ಘೋಷಣೆಯೋ? ಆಶಾದಾಯಕ ಸುಳಿವೋ..?

06:15 AM Dec 21, 2017 | |

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ದಶಕಗಳ ನಿರೀಕ್ಷೆ, ಬೇಡಿಕೆಗೆ ತಾತ್ಕಾಲಿಕ ಪರಿಹಾರಕ್ಕೆ ಆಶಾದಾಯಕ ಗಂಭೀರ ಯತ್ನವೊಂದು ನಡೆಯುತ್ತಿದ್ದು, ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ತಾತ್ಕಾಲಿಕ ಪರಿಹಾರ ಘೋಷಣೆಯೋ ಅಥವಾ ಆಶಾದಾಯಕ ಸುಳಿವು ನೀಡಿಕೆಯೋ ಎಂಬ ಕುತೂಹಲ ಹೋರಾಟಗಾರರಲ್ಲಿ ಹೆಚ್ಚಿಸಿದೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಬುಧವಾರ ದಿಲ್ಲಿಯಲ್ಲಿ ನಡೆದ ಬಿಜೆಪಿ ನಾಯಕರ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಪರಿಹಾರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವುದು ನಿರೀಕ್ಷೆಗಳು ಗರಿಗೆದರುವಂತಾಗಿದೆ. ಹೀಗಾಗಿ ಗುರುವಾರ ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದತ್ತ ಎಲ್ಲರ ಚಿತ್ತ ಹರಿದಿದೆ.

1975ರಿಂದ ಮಹದಾಯಿ, 2002ರಿಂದ ಕಳಸಾ-ಬಂಡೂರಿ ವಿವಾದ ಸುಳಿದಾಡುತ್ತಿದೆ. ಕರ್ನಾಟಕ-ಗೋವಾ ಚುನಾವಣೆಗಳು
ಬಂದಾಗಲೊಮ್ಮೆ ಮಿಂಚಿ ಮಾಯವಾಗುತ್ತಿದ್ದ ನೀರಿನ ವಿಚಾರ, ಕಳೆದೆರಡು ವರ್ಷಗಳಿಂದ ಹೋರಾಟದ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇದೀಗ ಮಹದಾಯಿಯಿಂದ ಕುಡಿಯುವ ಉದ್ದೇಶಕ್ಕೆ ನೀರು ಪಡೆಯುವ ಯತ್ನ ತೀವ್ರಗೊಂಡಿದೆ.ಕಳೆದೆರಡು ವರ್ಷಗಳಿಂದ ಮಹದಾಯಿ,ಕಳಸಾ-ಬಂಡೂರಿ ನೀರಿಗೆ ಒತ್ತಾಯಿಸಿ ನವಲಗುಂದ, ನರಗುಂದದಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ, ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣ ರಾಜಿ ಸೂತ್ರದಡಿ ಇತ್ಯರ್ಥಕ್ಕೆ ಮುಂದಾಗುವಂತೆ ಮೂರೂ ರಾಜ್ಯಗಳಿಗೆ ಸಲಹೆ ನೀಡಿದಾಗ್ಯೂ ವಿವಾದ ಇನ್ನಷ್ಟು ಜಟಿಲತೆ ಪಡೆದಿತ್ತಾದರೂ, ಪರಿಹಾರಕ್ಕೆ ಪ್ರಾಮಾಣಿಕ ಯತ್ನ ಆಗಿರಲಿಲ್ಲ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ತಾತ್ಕಾಲಿಕ ಪರಿಹಾರ ಯತ್ನಗಳು ಚಾಲನೆ ಪಡೆದುಕೊಂಡಿವೆ.

7.56 ಟಿಎಂಸಿ ಅಡಿ ನೀರು: ಮಹದಾಯಿ, ಕಳಸಾ-ಬಂಡೂರಿ ನೀರಿಗಾಗಿ ಹೋರಾಟಗಾರರು ಇತ್ತೀಚೆಗಷ್ಟೇ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ನಿವಾಸದೆದುರು ಅಹೋರಾತ್ರಿ ಧರಣಿ ಕೈಗೊಂಡ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗಮಿಸಿ ಡಿ.15ರೊಳಗೆ ಸಮಸ್ಯೆಗೆ ಪರಿಹಾರ ರೂಪಿಸುವ ಭರವಸೆ ನೀಡಿದ್ದರು. ಇದರ ಭಾಗವಾಗಿಯೇ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರ ಮನವೊಲಿಸುವ ಕಾರ್ಯ ಬಹುತೇಕ ಯಶಸ್ವಿ ಆಗಿದೆ. ಹುಬ್ಬಳ್ಳಿ ಸಮಾವೇಶದಲ್ಲಿ ಬಹುತೇಕ ಇದರ ಘೋಷಣೆ ಆಗಲಿದೆ ಎಂಬುದು ಬಿಜೆಪಿ ವಲಯದ ಅನಿಸಿಕೆ.

Advertisement

ಇದು ಸಾಧ್ಯವೇ ಆದಲ್ಲಿ ಮಹದಾಯಿಯಿಂದ ಕುಡಿಯುವ ನೀರಿನ ಉದ್ದೇಶದಡಿ ಸುಮಾರು 7.56 ಟಿಎಂಸಿ ಅಡಿ ನೀರು ಹರಿದು ಬರುವ ಸಾಧ್ಯತೆ ಇದೆ. ಬಿಜೆಪಿಯ ಈ ಯತ್ನಕ್ಕೆ ಗೋವಾ, ಮಹಾರಾಷ್ಟ್ರದಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ ಪಕ್ಷ ಸಹಮತ ಬಹಳ ಮುಖ್ಯವಾಗಿದೆ.

ಸಮ್ಮತಿ ಪತ್ರ ಬಹಿರಂಗ ಪಡಿಸಲಿ: ಮಹದಾಯಿ ತಾತ್ಕಾಲಿಕ ಪರಿಹಾರ ನಿಟ್ಟಿನಲ್ಲಿ ಬಿಜೆಪಿ ಯತ್ನವನ್ನು ಸ್ವಾಗತಿಸಿದರೂ ಹೋರಾಟಗಾರರು ತಮ್ಮೊಳಗಿನ ಆತಂಕ, ಅನುಮಾನಕ್ಕೆ ತೆರೆ ಬಿದ್ದಿಲ್ಲ ಎನ್ನುತ್ತಿದ್ದಾರೆ. ಮಹದಾಯಿ, ಕಳಸಾ-ಬಂಡೂರಿ ವಿವಾದ ತಾರ್ಕಿಕ ಅಂತ್ಯ ವಿಚಾರ ರಾಷ್ಟ್ರಮಟ್ಟದಲ್ಲಿ ಮಹತ್ವದ ಚರ್ಚೆಗೆ ಮುಂದಾಗಿರುವುದು ಸಂತಸ ತಂದಿದೆ. ಆದರೆ, ಇದಷ್ಟೇ ಸಾಲದು ನೀರು ಸಿಕ್ಕಾಗಲೇ ನಮ್ಮ ಬೇಡಿಕೆ ಈಡೇರಿದಂತಾಗಲಿದೆ ಎಂಬುದು ಹೋರಾಟಗಾರರ ಅನಿಸಿಕೆ. ಸದ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ 7.56 ಟಿಎಂಸಿ ಅಡಿ ನೀರು ಬಿಡಲು ಗೋವಾ ಮುಖ್ಯಮಂತ್ರಿ ಸಮ್ಮತಿಸಿದ್ದರೆ ಮೂರೂ ರಾಜ್ಯಗಳ ರಾಜಿ ಪತ್ರವನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಬೇಕು. ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರ ಒಪ್ಪಿಗೆ ಕುರಿತು ಗೋವಾ ಸರಕಾರ ಒಪ್ಪಿಗೆ ಪತ್ರ ನೀಡಬೇಕು. ಅದನ್ನು ಬಹಿರಂಗ ಪಡಿಸಬೇಕು. ಇದಾವುದು ಇಲ್ಲದೆ ನೀರು ಬಿಡಿಸುತ್ತೇವೆ ಎಂದು ಘೋಷಣೆ ಮಾಡಿದರೆ ಒಪ್ಪಲಾಗದು. ಬಿಜೆಪಿ ನಾಯಕರ ಘೋಷಣೆ ತೃಪ್ತಿ ತರದಿದ್ದರೆ ಡಿ.22ರಂದು ಬೆಂಗಳೂರಿಗೆ ತೆರಳಿ ಬಿಜೆಪಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಕಾಲಮಿತಿಯೊಳಗೆ ನೀರು ನೀಡುವ ಸ್ಪಷ್ಟ ಭರವಸೆ ನೀಡಬೇಕು ಎಂಬುದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರ ಒತ್ತಾಯ.

– ಆಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next