Advertisement

ಮಹದಾಯಿ: ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಪ್ರತಿಭಟನೆ

12:09 PM Aug 19, 2017 | Team Udayavani |

ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಹಿನ್ನೆಡೆಗೆ ಎರಡು ರಾಷ್ಟ್ರೀಯ ಪಕ್ಷಗಳು ಕಾರಣವಾಗಿದ್ದು, ಕೂಡಲೇ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

Advertisement

ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಮಹದಾಯಿ ಯೋಜನೆಗೆ ಹಿನ್ನೆಡೆಯಾಗಿದೆ. 2003ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್‌ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿದ್ದರು. ಆದರೆ, ಎಸ್‌.ಎಂ. ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ಯೋಜನೆಯನ್ನು ಲಘುವಾಗಿ ಪರಿಗಣಿಸಿದ ಪರಿಣಾಮ ಇಂದು ಇಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು. 

ಕರವೇ ಅಧ್ಯಕ್ಷ ಅಮೃತ ಇಜಾರಿ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದರೂ ಎಲ್ಲ ಸಂಸದರು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಯಾವ ಜನಪ್ರತಿನಿಧಿಗಳು ಸ್ಪಂದನೆ ತೋರುವುದಿಲ್ಲ.

ಯೋಜನೆಯನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಯಶಸ್ಸು ದೊರೆಯುತ್ತಿಲ್ಲ. ಜನಪ್ರತಿನಿಧಿಗಳ ಕುತಂತ್ರಕ್ಕೆ ಹೋರಾಟಗಾರರು ಹಾಗೂ ಜನರು ರೋಸಿ ಹೋಗಿದ್ದು, ಉಗ್ರ ಹೋರಾಟಕ್ಕೆ ಮುಂದಾಗುವ ಕಾಲ ಹತ್ತಿರ ಬಂದಿದೆ.

ಸಮಸ್ಯೆ ಬಗೆಹರಿಸುವಲ್ಲಿ ಕಾಂಗ್ರೆಸ್‌-ಬಿಜೆಪಿ ಪ್ರಯತ್ನ ಮಾಡದಿದ್ದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ರೈತ ಮುಖಂಡ ಶಿವಣ್ಣ ಹುಬ್ಬಳ್ಳಿ ಮಾತನಾಡಿ, ಕುಡಿಯಲು ನೀರು ಕೇಳಿದರೂ ರೈತರ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ನಡೆಯುತ್ತಿದೆ. 

Advertisement

ಕೇವಲ ಇಬ್ಬರು ಸಂಸದರಿರುವ ಗೋವಾ ಪರವಾಗಿ ಕೇಂದ್ರ ಕೆಲಸ ಮಾಡುತ್ತಿದೆ. 28 ಸಂಸದರಿದ್ದರೂ ಕೇಂದ್ರದ ಮೇಲೆ ಒತ್ತಡ ಹೇರುವ ಧೈರ್ಯ ಒಬ್ಬ ಸಂಸದರಿಗೂ ಇಲ್ಲದಿರುವುದು ವಿಪರ್ಯಾಸ. ಇಂತಹ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದರು. ಗೋಪಾಲ ಪಾಟೀಲ, ವಿನೋದ ಕ್ಯಾರಕಟ್ಟಿ, ಅಶೋಕ ಹಾದಿಮನಿ, ಸಾಗರ ಗಾಯಕವಾಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next